ಕುಂದಾಪುರ: ಬೈಕ್‌ಗಳ ಮುಖಾಮುಖಿ ಢಿಕ್ಕಿ, ಗಾಯಾಳು ಸಾವು

Views: 326
ಕುಂದಾಪುರ:ಹಂಗಳೂರಿನ ನಗು ಪ್ಯಾಲೇಸ್ ಎದುರಿನ ಸರ್ವಿಸ್ ರಸ್ತೆಯಲ್ಲಿ ಬೈಕುಗಳು ಮುಖಾಮುಖಿ ಢಿಕ್ಕಿ ಆದ ಪರಿಣಾಮ ಬೈಕ್ ಸವಾರ ಕುಂದಾಪುರ ನಗರದ ಬರೆಕಟ್ಟುವಿನ ಬಾಳೆಹಿತ್ಲು ನಿವಾಸಿ ಪೈಂಟರ್ ವೆಂಕಟೇಶ್ ಅವರ ಪುತ್ರ ಖಾಸಗಿ ಕಂಪೆನಿಯೊಂದರ ಉದ್ಯೋಗಿ ಶಶಾಂಕ್ ಮೊಗವೀರ (22) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಮತ್ತೊಬ್ಬ ಗಂಭೀರ ಗಾಯಗೊಂಡಿದ್ದ ಬುಲೆಟ್ ಸವಾರ ಕೂಡ ಮೃತಪಟ್ಟಿದ್ದಾರೆ.
ರವಿವಾರ ರಾತ್ರಿ ಬುಲೆಟ್ ಸವಾರ ಪುನೀತ್ ಚಿಕಿತ್ಸೆಗೆ ಸ್ಪಂದಿಸದೆ ಮಣಿಪಾಲದ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಹಾಸನ ಮೂಲದ ಪುನೀತ್ ಅವಿವಾಹಿತರಾಗಿದ್ದು, ಕಂಡ್ಲೂರಿನಲ್ಲಿ ಅಯ್ಯಂಗಾರ್ ಬೇಕರಿ ನಡೆಸುತ್ತಿದ್ದರು. ಕಳೆದ 12 ವರ್ಷಗಳಿಂದ ಕಂಡ್ಲೂರಿನಲ್ಲಿ ತನ್ನ ತಾಯಿ ಪದ್ಮಾ ಅವರೊಂದಿಗೆ ವಾಸಿಸುತ್ತಿದ್ದರು. ಅಪಘಾತದಲ್ಲಿ ಪುನೀತ್ ಅವರ ತಾಯಿ ಗಂಭೀರವಾಗಿ ಗಾಯಗೊಂಡಿದ್ದು ಮಣಿಪಾಲದ ಕೆಎಂಸಿಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕುಂದಾಪುರ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಭಾಗದಲ್ಲಿ ಹಿಂದೆಯೂ ಅಪಘಾತಗಳಾಗಿ ಬೈಕ್ ಸವಾರ ಸಾವಿಗೀಡಾದ ಘಟನೆ ಸಂಭವಿಸಿತ್ತು. ಸರ್ವಿಸ್ ರಸ್ತೆಯಲ್ಲಿ ಕತ್ತಲಿರುವುದೇ ಈ ಘಟನೆಗೆ ಕಾರಣ ಎನ್ನಲಾಗಿದೆ.






