ಕುಂದಾಪುರ- ಬೈಂದೂರಿನಲ್ಲಿ ಭಾರಿ ಮಳೆ ಜನಜೀವನ ಅಸ್ತವ್ಯಸ್ತ

Views: 100
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ಹಾಗೂ ಬೈಂದೂರು ತಾಲೂಕಿನಾದ್ಯಂತ ಮಳೆಯ ಅಬ್ಬರ ಜೋರಾಗಿ, ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಕುಂದಾಪುರ ಹಾಗೂ ಬೈಂದೂರು ತಾಲೂಕಿನಾದ್ಯಂತ ಸೋಮವಾರ ದಿನವಿಡೀ ಗಾಳಿ ಸಹಿತ ಉತ್ತಮ ಮಳೆಯಾಗಿದೆ. ಕೆಲವೆಡೆ ಮನೆಗಳಿಗೆ ಹಾನಿಯಾಗಿದ್ದು, ಸೌಪರ್ಣಿಕಾ ನದಿ ಪಾತ್ರದ ಪ್ರದೇಶಗಳಲ್ಲಿ ಸೋಮವಾರ ಮತ್ತೆ ನೆರೆ ಬಂದಿದೆ.
ಕಳೆದೆರಡು ದಿನಗಳಿಂದ ಪಕ್ಷಿಮ ಘಟ್ಟ ತಪ್ಪಲಿನ ನದಿಗಳಾದ ವಾರಾಹಿ, ಸೌಪರ್ಣಿಕ, ಕುಬ್ಜ, ಚಕ್ರ, ನದಿಗಳು ಉಕ್ಕಿ ಹರಿಯುತ್ತಿವೆ. ಸೌಪರ್ಣಿಕ ನದಿ ಪಾತ್ರದಲ್ಲಿರುವ ನಾವುಂದ ಗ್ರಾಮದ ಸಾಲ್ಗುಡ ಅರೆಹೊಳೆ ಪ್ರದೇಶದಲ್ಲಿ ನೆರೆ ಬಂದಿದೆ. ಇದರಿಂದ ಇಲ್ಲಿನ ಅರೆಹೊಳೆ – ನಾವುಂದ ಸಂಪರ್ಕ ರಸ್ತೆ ಜಲಾವೃತಗೊಂಡಿದ್ದು ಜನ ಸಂಚರಿಸಲು ದೋಣಿಯನ್ನು ಆಶ್ರಯಿಸುವಂತಾಗಿದೆ.
ವಾರಾಹಿ ಮಾನಿ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಹೇರಳವಾಗಿ ನೀರಿನ ಒಳ ಹರಿವು ಹರಿದು ಬರುತ್ತಿದೆ. ಸತತವಾಗಿ ಬೀಳುತ್ತಿರುವ ಮಳೆಯಿಂದಾಗಿ ಮಾನಿ ಜಲಾಶಯನದ ನೀರಿನ ಮಟ್ಟವು ಏರುತ್ತಿರುವುದರಿಂದ ಮುಂಜಾಗ್ರತ ಕ್ರಮವಾಗಿ ಮಾನಿ ಜಲಾಶಯನದಿಂದ ನೀರನ್ನು ಹೊರ ಬೀಡಲಿದ್ದಾರೆ. ಇದರಿಂದ ಅಣೆಕಟ್ಟೆಯ ಕೆಳದಂಡೆಯ ಪ್ರದೇಶ ಮತ್ತು ವಾರಾಹಿ ಹಾಗೂ ಹಾಲಾಡಿ ನದಿ ಪಾತ್ರದ ಜನರು ಜಾಗ್ರತೆ ವಹಿಸುವಂತೆ ಸೂಚನೆ ನೀಡಲಾಗಿದೆ.
ಅಣೆಕಟ್ಟೆಯ ಕೆಳದಂಡೆಯ ವಾರಾಹಿ ಮತ್ತು ಹಾಲಾಡಿ ನದಿ ಪಾತ್ರದುದ್ದಕ್ಕೂ ವಾಸಿಸುತ್ತಿರುವ ಸಾರ್ವಜನಿಕರು ಮತ್ತು ತಮ್ಮ ಜಾನುವಾರು ಸೇರಿದಂತೆ ಮೊದಲಾದ ವಸ್ತುಗಳೊಂದಿಗೆ ಸುರಕ್ಷತೆಯೊಂದಿಗೆ ಇರುವಂತೆ ಕರ್ನಾಟಕ ವಿದ್ಯುತ್ ನಿಗಮದ ಕಾರ್ಯನಿರ್ವಾಹಕ ಅಭಿಯಂತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಡುಕೋಣೆ, ಬಡಾಕೆರೆ ಹಡವು ಸುತ್ತಮುತ್ತಲಿನ ನೂರಾರು ಎಕರೆ ಗದ್ದೆಗಳು ಮುಳುಗಡೆಯಾಗಿದ್ದು, ನಾಟಿ ಮಾಡಿ ಬೇರು ಬಿಡುವ ಹೊತ್ತಿನಲ್ಲಿಯೇ ಕೊಳೆಯುವ ಭೀತಿ ಆತಂಕ ಈ ಭಾಗದ ರೈತರದ್ದಾಗಿದೆ.