ಕರಾವಳಿ

ಕುಂದಾಪುರ, ಬೈಂದೂರಿನಲ್ಲಿ ಭಾರೀ ಮಳೆ: ಉಕ್ಕಿ ಹರಿದ ಪಂಚ ನದಿಗಳು, ಹಲವೆಡೆ ನೆರೆ,  ಜನಜೀವನ ಅಸ್ತವ್ಯಸ್ತ

Views: 153

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ಬೈಂದೂರು ತಾಲೂಕಿನಾದ್ಯಂತ ಹಲವೆಡೆ ಮನೆ, ಜಾನುವಾರು, ಹಟ್ಟಿಗಳಿಗೆ ಹಾನಿಯಾಗಿದ್ದು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಉಭಯ ತಾಲೂಕಿನ ಪಂಚ ನದಿಗಳಾದ ವಾರಾಹಿ,ಚಕ್ರ, ಖೇಠ, ಸೌಪರ್ಣಿಕಾ, ಕುಬ್ಜ ನದಿಗಳು ಉಕ್ಕಿ ಹರಿದ ಪರಿಣಾಮ ಹಲೆವೆಡೆ ನೆರೆ ಉಂಟಾಗಿ ಜನ ಜೀವನ ಅಸ್ತವ್ಯಸ್ತಗೊಂಡಿತು.

ಭಾರಿ ಮಳೆಯಿಂದಾಗಿ ಬೈಂದೂರು, ಕುಂದಾಪುರ, ಕೋಟ, ಸಾಲಿಗ್ರಾಮ, ಬ್ರಹ್ಮಾವರ, ಮಣಿಪಾಲ, ಹೆಬ್ರಿ, ಕಾರ್ಕಳ, ಉದ್ಯಾವರ ಸೇರಿದಂತೆ ಹಲವು ಪ್ರದೇಶಗಳು ಜಲಾವೃತವಾಗಿವೆ. ಬೈಂದೂರು ಮತ್ತು ಕುಂದಾಪುರದ ಕೆಲವೆಡೆ ಮೇಘಸ್ಫೋಟ ಸಂಭವಿಸಿದ್ದು, ಬಿಜೂರು, ಸಾಲ್ಬುಡ, ಹಳಗೇರಿ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಸುಮನಾವತಿ, ಎಡಮಾವಿನಹೊಳೆ, ಸೌಪರ್ಣಿಕಾ ನದಿಗಳು ಉಕ್ಕಿ ಹರಿದು ಮನೆಗಳು ಮತ್ತು ಸುಮಾರು 50 ಎಕರೆಗೂ ಹೆಚ್ಚು ಬೆಳೆ ಜಲಾವೃತವಾಗಿದೆ.

ಸ್ಥಳಕ್ಕೆ ಎನ್‌ಡಿಆರ್‌ಎಫ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿದ್ದು, ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ತಲುಪಲು ಅಗ್ನಿಶಾಮಕ ಸಿಬ್ಬಂದಿ ನೆರವಾಗಿದ್ದಾರೆ. ಬೈಂದೂರಿನಲ್ಲಿ ಗಂಜಿ ಕೇಂದ್ರ ತೆರೆಯಲಾಗಿದ್ದು, ಸಂತ್ರಸ್ತರಿಗೆ ಊಟೋಪಚಾರ ವ್ಯವಸ್ಥೆ ಮಾಡಲಾಗಿದೆ. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಸ್ವತಃ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದಾರೆ.

ಸುದ್ದಿಗಾರರೊಂದಿಗೆ ಶಾಸಕ ಗುರುರಾಜ್ ಗಂಟಿಹೊಳೆ, ಜಿಲ್ಲಾಡಳಿತ ಹಾಗೂ ಸ್ಥಳೀಯರ ಸಹಕಾರದೊಂದಿಗೆ ನೆರೆಪೀಡಿತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ.

ಗಂಜಿ ಕೇಂದ್ರಗಳನ್ನು ಹೆಚ್ಚಿಸಲು ಚರ್ಚಿಸಲಾಗುವುದು, ಪ್ರವಾಹ ಇಳಿದ ನಂತರ ಸೂಕ್ತ ಪರಿಹಾರ ದೊರಕಿಸಲು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಮಾರಣಕಟ್ಟೆ ದೇವಸ್ಥಾನಕ್ಕೆ ಉಕ್ಕಿ ಹರಿದು ಬಂದ ನೀರು,ಪೂಜೆ ಸಲ್ಲಿಕೆ

ಸ್ಥಳೀಯರಾದ ಗೋಪಾಲ ಗಾಣಿಗ, ಹಳಗೇರಿ ಗ್ರಾಮದಲ್ಲಿ ಸುಮಾರು ಹತ್ತು ಮನೆಗಳು ಜಲಾವೃತವಾಗಿವೆ. ಬೆಳಗಿನ 4 ಗಂಟೆ ಸುಮಾರಿಗೆ ಏಕಾಏಕಿ ನೀರು ಮನೆಗಳಿಗೆ ನುಗ್ಗಿದೆ. ಕಳೆದ 25 ವರ್ಷಗಳಲ್ಲಿ ಉಂಟಾಗಿರುವ ಅತ್ಯಂತ ದೊಡ್ಡ ಪ್ರವಾಹ ಇದಾಗಿದೆ ಎಂದರು.

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಾಗಿರುವುದರಿಂದ ಬಿಜೂರು ಗ್ರಾಮದ ಗರಡಿ ಪ್ರದೇಶದ ನದಿ ತೀರದಲ್ಲಿ 20 ಕ್ಕೂ ಹೆಚ್ಚು ಮನೆಗಳಿಗೆ ನೆರೆ ನುಗ್ಗಿದೆ ಮುನ್ನೆಚ್ಚರಿಕೆಯ ಕ್ರಮವಾಗಿ ಎನ್ ಡಿ ಆರ್ ಎಫ್ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ಸೌಪರ್ಣಿಕಾ ನದಿ ಉಕ್ಕಿ ಹರಿದ ಪರಿಣಾಮ ಅರೆಹೊಳೆ ಪ್ರದೇಶದ ನೂರಕ್ಕೂ ಮಿಕ್ಕಿ ಮನೆಗಳ ಸಂಪರ್ಕ ಕಡಿತಗೊಂಡಿದ್ದು, ನಾವುಂದ ಅರೆಹೊಳೆ ರಸ್ತೆ ಮುಳುಗಡೆಯಾಗಿದೆ ಜನರು ದೋಣಿಯನ್ನೇ ಆಶ್ರಯಿಸುವಂತಾಗಿದೆ. ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಕರೆತರಲಾಯಿತು. ನಾಟಿಗೆಂದು ಬಿತ್ತನೆ ಮಾಡಿದ ಬೀಜಗಳು ಮುಳುಗಡೆಯಾಗಿದ್ದು, ಹೊಸದಾಗಿ ಬಿತ್ತನೆ ಮಾಡಲು ಬೀಜ ಉಚಿತವಾಗಿ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.

Related Articles

Back to top button
error: Content is protected !!