ಕುಂದಾಪುರ: ಕುಂಭಾಶಿಯು ಕೊರವಡಿಯಲ್ಲಿ ಯುವಕನ ಮೇಲೆ ಏಳು ಜನರ ತಂಡ ಮಾರಣಾಂತಿಕ ಹಲ್ಲೆ
Views: 151
ಕನ್ನಡ ಕರಾವಳಿ ಸುದ್ದಿ: ಹಳೇ ದ್ವೇಷದ ಹಿನ್ನೆಲೆಯಲ್ಲಿ ಯುವಕನೋರ್ವನ ಮೇಲೆ ಏಳು ಜನರ ತಂಡ ಸೋಡಾ ಬಾಟಲಿ ಹಾಗೂ ಹೆಲ್ಮೆಟ್‌ನಿಂದ ಭೀಕರವಾಗಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಕುಂಬಾಶಿಯ ಕೊರವಡಿ ಎಂಬಲ್ಲಿ ನಡೆದಿದೆ.
ತೆಕ್ಕಟ್ಟೆ ಗ್ರಾಮದ ರಂಜಿತ್ ಎಂಬುವವರೇ ಹಲ್ಲೆಗೊಳಗಾದ ದುರ್ದೈವಿಯಾಗಿದ್ದು, ಸದ್ಯ ಇವರು ಗಂಭೀರ ಸ್ಥಿತಿಯಲ್ಲಿ ಉಡುಪಿಯ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೇ 17ರಂದು ರಾತ್ರಿ 10 ಗಂಟೆಯ ಸುಮಾರಿಗೆ ರಂಜಿತ್ ಅವರು ಕೆಲಸ ಮುಗಿಸಿ ಮನೆಗೆ ವಾಪಸಾಗುತ್ತಿದ್ದಾಗ ಜೋರಾಗಿ ಮಳೆ ಬರುತ್ತಿದ್ದ ವೇಳೆ ಅವರು ಕುಂಬಾಶಿಯ ಕೊರವಡಿ ಬಳಿಯ ಅಂಗಡಿಯೊಂದರ ಎದುರು ತಮ್ಮ ಬೈಕ್ ನಿಲ್ಲಿಸಿ ಆಶ್ರಯ ಪಡೆದಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಆರೋಪಿಗಳಾದ ವಿಕಾಸ್ ಪೂಜಾರಿ, ಶರತ್ ಪೂಜಾರಿ, ಮಹೇಂದ್ರ ಪೂಜಾರಿ, ಸುಕೇಶ್ ಪೂಜಾರಿ, ಅಭಿಲಾಷ್ ಪೂಜಾರಿ, ಮಂಜುನಾಥ ಮತ್ತು ಸಂದೇಶ್ ಎಂಬುವವರು ಒಟ್ಟು ಸೇರಿ, ರಂಜಿತ್‌ನನ್ನು ಕೊಲ್ಲುವ ಉದ್ದೇಶದಿಂದ ಸೋಡಾ ಬಾಟಲಿ ಹಾಗೂ ಹೆಲ್ಮೆಟ್‌ನಿಂದ ಮನಬಂದಂತೆ ಥಳಿಸಿದ್ದಾರೆ.
ದಾಳಿಯ ತೀವ್ರತೆಗೆ ರಂಜಿತ್ ಅವರಿಗೆ ಗಂಭೀರ ಸ್ವರೂಪದ ರಕ್ತಗಾಯಗಳಾಗಿದ್ದವು. ವಿಷಯ ತಿಳಿದ ತಕ್ಷಣ ರಂಜಿತ್ ಅವರ ಸಹೋದರ ರಾಘವೇಂದ್ರ ಸ್ಥಳಕ್ಕೆ ಧಾವಿಸಿ, ತಕ್ಷಣಕ್ಕೆ ಅವರನ್ನು ಮನೆಗೆ ಕರೆದುಕೊಂಡು ಹೋಗಿದ್ದರು.
ಆದರೆ ಮರುದಿನ (ಮೇ 18) ಮುಂಜಾನೆ ರಂಜಿತ್ ಹಾಸಿಗೆಯಿಂದ ಏಳಲಾರದಷ್ಟು ಅಸ್ವಸ್ಥರಾಗಿದ್ದನ್ನು ಕಂಡು ಆತಂಕಗೊಂಡ ಕುಟುಂಬಸ್ಥರು ತಕ್ಷಣ ಅವರನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಂಜಿತ್ ಅವರ ಸ್ಥಿತಿಯನ್ನು ಪರೀಕ್ಷಿಸಿದ ವೈದ್ಯರು, ಸ್ಕ್ಯಾನಿಂಗ್ ಹಾಗೂ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆಯೆಂದು ಸೂಚಿಸಿದ್ದರಿಂದ ಸದ್ಯ ಅವರನ್ನು ಉಡುಪಿಯ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಳೇ ವೈಷಮ್ಯವೇ ಈ ಘಟನೆಗೆ ಪ್ರಮುಖ ಕಾರಣ ಎನ್ನಲಾಗಿದ್ದು, ಗಾಯಾಳುವಿನ ಸಹೋದರ ರಾಘವೇಂದ್ರ ನೀಡಿದ ದೂರಿನನ್ವಯ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
.






