ಇತರೆ

ಕುಂದಾಪುರ: ಆಟೋ ರಿಕ್ಷಾದಲ್ಲಿ ಅಮಾಸೆಬೈಲಿನ ಶಾಲಾ ಬಾಲಕಿಗೆ ಲೈಂಗಿಕ ದೌರ್ಜನ್ಯ ಪ್ರಕರಣ: ಇಬ್ಬರಿಗೆ 5 ವರ್ಷ ಜೈಲು ಶಿಕ್ಷೆ

Views: 511

ಕನ್ನಡ ಕರಾವಳಿ ಸುದ್ದಿ: ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಮಚ್ಚಟ್ಟು ಗ್ರಾಮದ ಪ್ರಶಾಂತ್ ನಾಯ್ಕ (28) ಹಾಗೂ ಶರತ್ ಶೆಟ್ಟಿ (32) ಅವರಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ ತಲಾ 5 ಸಾವಿರ ರೂ. ದಂಡ ವಿಧಿಸಿ ಉಡುಪಿಯ ಪೋಕ್ಸೋ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀನಿವಾಸ ಸುವರ್ಣ ಅವರು ಸಾಕ್ಷಿಗಳ ವಿಚಾರಣೆ ನಡೆಸಿದ್ದಾರೆ. ಆರೋಪಿಗಳು ದಂಡ ಭರಿಸಲು ತಪ್ಪಿದಲ್ಲಿ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶಿಸಿದ್ದಾರೆ. ಇದೇ ವೇಳೆ ನೊಂದ ಬಾಲಕಿಗೆ ಸರಕಾರದಿಂದ 50 ಸಾವಿರ ರೂ. ಪರಿಹಾರ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ.

ಏನಿದು ಪ್ರಕರಣದ ಹಿನ್ನೆಲೆ: ಕಳೆದ ವರ್ಷ ಜು.15ರಂದು ಶರತ್ ಶೆಟ್ಟಿ ಎಂದಿನಂತೆ ತನ್ನ ರಿಕ್ಷಾದಲ್ಲಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರುವಾಗ ಸ್ನೇಹಿತ ಮಚ್ಚಟ್ಟು ಗ್ರಾಮದ ಪ್ರಶಾಂತ್ ನಾಯ್ಕನನ್ನು ಜತೆಗೆ ಕರೆದುಕೊಂಡು ಬಂದಿದ್ದನು. ಪ್ರಯಾಣಿಸುತ್ತಿರುವ ವೇಳೆ ಇಬ್ಬರೂ ಜತೆಗೂಡಿ ಅಮಾಸೆಬೈಲು ಜಂಕ್ಷನ್ ಬಳಿ ಲೈಂಗಿಕ ದೌರ್ಜನ್ಯ ಎಸಗಿದ್ದರು. ವಿದ್ಯಾರ್ಥಿನಿ ಶಾಲೆಯ ಮುಖ್ಯ ಶಿಕ್ಷಕರಿಗೆ ದೂರು ನೀಡಿದ್ದಾಳೆ. ಈ ಹಿನ್ನೆಲೆಯಲ್ಲಿ ಮುಖ್ಯ ಶಿಕ್ಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಕುಂದಾಪುರದ ಡಿವೈ ಎಸ್‌ಪಿ ಎಚ್‌.ಡಿ. ಕುಲಕರ್ಣಿ ಅವರು ತನಿಖೆ ನಡೆಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಾಸಿಕ್ಯೂಶನ್ ಪರ ಪೋಕ್ಸೋ ವಿಶೇಷ ನ್ಯಾಯಾಲಯದ ಸರಕಾರಿ ಅಭಿಯೋಜಕ ಬೇಳೂರು ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದರು.

 

Related Articles

Back to top button
error: Content is protected !!