ಕನ್ನಡ ಕರಾವಳಿ ಸುದ್ದಿ: ಕುಂದಾಪುರ ವಕೀಲರ ಸಂಘ (ರಿ ), ಕೋಟಿಲಿಂಗೇಶ್ವರ ಕಲಾಬಳಗ, ಕೋಟೇಶ್ವರ, ಯಕ್ಷಾಭಿಮಾನಿಗಳು ಕುಂದಾಪುರ, ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯ ಜನ್ಮ ಶತಮಾನೋತ್ಸವ ಸಮಿತಿ, ಸೌಕೂರು ಇವರ ಸಂಯುಕ್ತ ಆಶ್ರಯದಲ್ಲಿ ಕುಂದಾಪುರ ನೆಹರು ಮೈದಾನದಲ್ಲಿ ಸೌಕೂರು ಮೇಳದ ರಂಗ ವೇದಿಕೆಯಲ್ಲಿ ಯಕ್ಷಚಿಂತನ ಮತ್ತು ಯಕ್ಷಗಾನ ಪ್ರದರ್ಶನ ನಡೆಯಿತು. ,
ಖ್ಯಾತ ಯಕ್ಷಗಾನ ಪ್ರಸಂಗಕರ್ತ ಪ್ರೋ. ಪವನ್ ಕಿರಣ್ ಕೆರೆಯವರು ಮರೆಯಾಗುತ್ತಿರುವ ಬಣ್ಣದ ವೇಷ ಎಂಬ ವಿಷಯದ ಬಗ್ಗೆ ಮಾತನಾಡಿ ಹಿಂದಿನ ಯಕ್ಷಗಾನದಲ್ಲಿ ಬಣ್ಣದ ವೇಷದಾರಿಗೆ ಒಂದು ಪ್ರತ್ಯೇಕ ಸ್ಥಾನಮಾನವಿದೆ, ಹಿಂದಿನ ಕಾಲದಲ್ಲಿ ಬಣ್ಣದ ವೇಷ ಮಾಡಲು ಸುಮಾರು 4 ತಾಸುಗಳು ಬೇಕು. ಆದರೆ ರಂಗದಲ್ಲಿ ಕೇವಲ 15 ನಿಮಿಷ ಅವಕಾಶವಿರುತ್ತದೆ. ಆದರೆ ಬಡಗಿನ ಮೇಳದಲ್ಲಿ ಈಗ ಬಣ್ಣದ ವೇಷಕ್ಕೆ ಅವಕಾಶವಿಲ್ಲ. ತೆಂಕಿನಲ್ಲಿ ಮಾತ್ರ ಅದಕ್ಕೆ ಅವಕಾಶವಿರುತ್ತದೆ. ಬಡಗಿನಲ್ಲಿ ಅವಕಾಶವಿಲ್ಲವಿರುವುದು ತುಂಬಾ ಬೇಸರ ಸಂಗತಿ ಅದನ್ನು ಯಕ್ಷಗಾನ ಪ್ರೇಮಿಗಳಾದ ನಾವು ಪ್ರೋತ್ಸಾಹಿಸಬೇಕೆಂದು ಹೇಳಿದರು.
ಕುಂದಾಪುರ ವಕೀಲರಾದ ಹಂದಕುಂದ ಅಶೋಕ್ ಶೆಟ್ಟಿಯವರು ಮಾತನಾಡಿ, ಕುಂದಾಪುರ ಪರಿಸರವು ಯಕ್ಷಗಾನದ ಕಾಶಿ, ಇಲ್ಲಿ ಸಾವಿರಾರು ಯಕ್ಷಗಾನ ಪ್ರದರ್ಶನ ಕಂಡಿದ್ದು ನೂರಾರು ಕಲಾವಿದರನ್ನು ಬೆಳೆಸಿ ಪ್ರೋತ್ಸಾಹಿಸಿದ ಕೀರ್ತಿ ನಮಗೆ ಇದೆ. ಇದನ್ನು ಬೆಳೆಸಿಕೊಂಡು ಹೋಗಬೇಕೆಂದು ನುಡಿದರು.
ವೇದಿಕೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿದ ಹಿರಿಯ ವಕೀಲ ಸಂತೋಷ ಕುಮಾರ್ ಶೆಟ್ಟಿಯವರು ಶುಭ ಹಾರೈಸಿದರು. ವೇದಿಕೆಯಲ್ಲಿ ಮೇಳದ ಯಜಮಾನ ಕಿಶನ್ ಹೆಗ್ಡೆ, ವಕೀಲ ಗಿಳಿಯಾರು ಪ್ರಕಾಶ್ಚಂದ್ರ ಶೆಟ್ಟಿ, ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯ ಉಪಸ್ಥಿತರಿದ್ದರು.
ವಕೀಲ ಶರತ್ ಶೆಟ್ಟಿ ವಿರಚಿತ ಶ್ರೀದೇವಿ ತ್ರೈಶಕ್ತಿ ಯಕ್ಷಗಾನ ಪ್ರಸಂಗ ಪ್ರದರ್ಶನ ನಡೆಯಿತು. ಪ್ರೋ. ಪವನ್ ಕಿರಣ್ ಕೆರೆ ಅವರನ್ನು ಸಂಘಟಕರ ಪರವಾಗಿ ಸನ್ಮಾನಿಸಲಾಯಿತು.