ಕುಂದಾಪುರ:ಗಂಡ- ಹೆಂಡತಿ ಜಗಳ, ವಾರಾಹಿ ನದಿಗೆ ಹಾರಿ ಕೊಚ್ಚಿ ಹೋದ ಮೃತದೇಹಕ್ಕಾಗಿ ತೀವ್ರ ಹುಡುಕಾಟ

Views: 25
ಕುಂದಾಪುರ: ಕಂಡ್ಲೂರು ಸಮೀಪದ ಸೇತುವೆಯಿಂದ ಮಂಗಳವಾರ ಅಪರಾಹ್ನ ವಾರಾಹಿ ನದಿಗೆ ಹಾರಿ, ನೀರಲ್ಲಿ ಕೊಚ್ಚಿಕೊಂಡು ಹೋಗಿರುವ ಹರೀಶ್ (44) ಕಾಳಾವರ ಅವರ ಮೃತದೇಹಕ್ಕಾಗಿ ಬುಧವಾರ ಸಂಜೆಯವರೆಗೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ.
ಕುಂದಾಪುರದ ಅಗ್ನಿ ಶಾಮಕ ದಳದ ಸಿಬಂದಿ ಬೋಟಿನಲ್ಲಿ, ಸ್ಥಳೀಯ ಶೌರ್ಯ ತಂಡದ ಸದಸ್ಯರು, ಕಾಳಾವರದ ತಂಡ, ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡದಿಂದ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಕಂಡ್ಲೂರಿನಿಂದ ಗುಲ್ವಾಡಿ, ಬಸ್ರೂರು, ಆನಗಳ್ಳಿ, ಸಂಗಮ್ ಸೇತುವೆ ಪಂಚಗಂಗಾವಳಿವರೆಗೂ ಹುಡುಕಿದರೂ ಮೃತದೇಹ ಪತ್ತೆಯಾಗಿಲ್ಲ
ಕಂಡ್ಲೂರು ಠಾಣಾ ಎಸ್‌ಐ ನೂತನ್ ಹಾಗೂ ಸಿಬಂದಿ ಹುಡುಕಾಟ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.
ಮೃತದೇಹ ಹುಡುಕಾಟ ಕಾರ್ಯಾಚರಣೆ ನಡೆಯುತ್ತಿರುವ ಪ್ರದೇಶಕ್ಕೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಭೇಟಿ ನೀಡಿ, ಪತ್ತೆಗಾಗಿ ಎಲ್ಲ ಪ್ರಯತ್ನ ನಡೆಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.
ಏನಿದು ಘಟನೆ?
ಗಂಡ- ಹೆಂಡತಿ ನಡುವೆ ಜಗಳ ಉಂಟಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಇಬ್ಬರ ಜಗಳವನ್ನು ರಾಜಿ ಪಂಚಾಯಿತಿ ಮೂಲಕ ಇತ್ಯರ್ಥಪಡಿಸಲಾಯಿತು.
ಮಂಗಳವಾರ ಅಪರಾಹ್ನ ಠಾಣೆಗೆ ಹೋಗಿ ಮರಳಿ ಪತ್ನಿ, ತಾಯಿ, ಅಕ್ಕನೊಂದಿಗೆ ರಿಕ್ಷಾದಲ್ಲಿ ಬರುತ್ತಿದ್ದರು. ಕಂಡ್ಲೂರು ಸೇತುವೆ ಬಳಿ ತಲುಪಿದಾಗ ಕೈಗೆ ಕಟ್ಟಿದ್ದ ತಾಯತವನ್ನು ನದಿಗೆ ಎಸೆದು ಬರುತ್ತೇನೆಂದು ಹೇಳಿ ಹರೀಶ್ ರಿಕ್ಷಾವನ್ನು ನಿಲ್ಲಿಸುವಂತೆ ಚಾಲಕನಿಗೆ ಹೇಳಿದರು. ರಿಕ್ಷಾದಿಂದ ಇಳಿದು ಪತ್ನಿ, ತಾಯಿ, ಅಕ್ಕ ನೋಡ ನೋಡುತ್ತಿದ್ದಂತೆ ಸೇತುವೆಯಿಂದ ನದಿಗೆ ಹಾರಿದರು. ಸ್ಥಳದಲ್ಲಿ ಹಲವಾರು ಮಂದಿ ಇದ್ದರೂ ಭಾರೀ ಮಳೆಯ ಕಾರಣ ತುಂಬಿ ಹರಿಯುತ್ತಿದ್ದ ನದಿಗೆ ಇಳಿದು ರಕ್ಷಣೆ ಮಾಡುವುದು ಕಷ್ಟವಾಗಿತ್ತು.
ಭಾರಿ ಮಳೆ ಹಾಗೂ ಪ್ರವಾಹದ ಕಾರಣದಿಂದ ಮೃತದೇಹ ಪತ್ತೆ ಕಾರ್ಯಾಚರಣೆಗೆ ವಿಳಂಬವಾಗಿ ಮೃತದೆಹವು ಇನ್ನು ಪತ್ಯೆಯಾಗದಕಾರಣ ಯಾವುದೇ ಸಮಯದಲ್ಲಿ ಕುಂದಾಪುರದ ಪಂಚ ಗಂಗಾವಳಿ ನದಿಯ ಯಾವುದೇ ಭಾಗದಲ್ಲಿ ಕಂಡುಬಂದರೂ ತಕ್ಷಣ ಮುಳುಗುತಜ್ಞ ದಿನೇಶ್ ಖಾರ್ವಿ ರಕ್ಷಣಾ ತಂಡಕ್ಕೆ ಮಾಹಿತಿ ನೀಡಬೇಕಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ದಿನೇಶ್ ಖಾರ್ವಿ -8618513248 ವೆಂಕಟೇಶ್ ಖಾರ್ವಿ-9448462781 ಸಚಿನ್ ಖಾರ್ವಿ- 8197991084