ಕಾರ್ಯಕರ್ತರಲ್ಲಿ ಚೈತನ್ಯ ತುಂಬಿ ಪಕ್ಷವನ್ನು ಬಲವರ್ಧನೆ ಮಾಡಲು ಬಿಜೆಪಿ ಚಿಂತನ-ಮಂಥನ ಸಭೆ

Views: 2
ಬೆಂಗಳೂರು,: ರಾಜ್ಯ ಬಿಜೆಪಿಯ ಮುಂದಿನ ದಿಕ್ಕು ದೆಸೆಗಳು ಯಾವ ರೀತಿ ಇರಬೇಕು, ಪಕ್ಷವನ್ನು ಸದೃಢಗೊಳಿಸಲು ಇರಬೇಕಾದ ದಿಟ್ಟ ಹೆಜ್ಜೆಗಳು, ತಳಮಟ್ಟದಿಂದ ಪಕ್ಷದ ಬಲವರ್ಧನೆಗೆ ರೂಪಿಸಬೇಕಾದ ಕಾರ್ಯಕ್ರಮಗಳು, ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧದ ಹೋರಾಟ ಸೇರಿದಂತೆ ಪಕ್ಷ ಸಂಘಟನೆಗೆ ಸಂಬಂಧಿಸಿದಂತೆ ಹತ್ತು ಹಲವು ವಿಚಾರಗಳ ಬಗ್ಗೆ ಬಿಜೆಪಿಯ ಪದಾಧಿಕಾರಿಗಳ ಸಭೆಯಲ್ಲಿ ಚಿಂತನ-ಮಂಥನ ನಡೆಸಲಾಯಿತು.
ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ವಿಜಯೆಂದ್ರ ನೇಮಕಗೊಂಡ ನಂತರ ನೂತನ ಪದಾಧಿಕಾರಿಗಳ ಚೊಚ್ಚಲ ಸಭೆ ಇಂದು ಬಿಜೆಪಿ ಕಚೇರಿಯಲ್ಲಿ ನಡೆದಿದ್ದು, ಈ ಸಭೆಯಲ್ಲಿ ಪ್ರಮುಖವಾಗಿ ಪಕ್ಷ ಸಂಘಟನೆ ಮತ್ತು ಲೋಕಸಭಾ ಚುನಾವಣೆ ತಯಾರಿ ಬಗ್ಗೆಯೇ ಹೆಚ್ಚಿನ ಚರ್ಚೆಗಳು ನಡೆದವು. ವಿಧಾನಸಭಾ ಚುನಾವಣೆಯ ಸೋಲಿನ ನಂತರ ಮಂಕಾಗಿರುವ ಕಾರ್ಯಕರ್ತರಲ್ಲಿ ಚೈತನ್ಯ ತುಂಬಿ ಪಕ್ಷವನ್ನು ತಳಮಟ್ಟದಿಂದ ಬಲವರ್ಧನೆ ಮಾಡಲು ಏನೆಲ್ಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಪಕ್ಷದ ಮುಂದಿನ ಹೆಜ್ಜೆಗಳು ಏನಿರಬೇಕು ಎಂಬ ಬಗ್ಗೆಯೂ ಚರ್ಚೆಗಳು ನಡೆದವು.
ವಿಧಾನಸಭಾ ಚುನಾವಣೆಯ ಸೋಲಿನ ಹಿನ್ನೆಲೆಯಲ್ಲಿ ಪಕ್ಷಕ್ಕೆ ಹೆಚ್ಚಿನ ಶಕ್ತಿ ತುಂಬಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳನ್ನು ಗೆಲ್ಲಲು ಏನೆಲ್ಲ ಕಾರ್ಯತಂತ್ರಗಳನ್ನು ರೂಪಿಸಬೇಕು ಎಂಬ ಗ್ಗೆಯೂ ಸಭೆಯಲ್ಲಿ ಚರ್ಚೆಗಳು ಆದವು ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಹಾಗೆಯೇ ಮುಂಬರುವ ಬಿಬಿಎಂಪಿ ಜಿಲ್ಲಾ ತಾಲ್ಲೂಕು ಪಂಚಾಯಿತಿ ಚುನಾವಣೆಗಳ ಗೆಲುವಿನ ಬಗ್ಗೆಯೂ ಚರ್ಚೆಗಳು ನಡೆದವು.
ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲು ವಿಕಸಿತ ಭಾರತ ಕಾರ್ಯಕ್ರಮವನ್ನು ರಾಜ್ಯದೆಲ್ಲೆಡೆ ಯಶಸ್ವಿಗೊಳಿಸುವ ಬಗ್ಗೆಯೂ ಪದಾಧಿಕಾರಿಗಳ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು.
ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ವಿಕಸಿತ ಭಾರತ ಕಾರ್ಯಕ್ರಮವನ್ನು ಹಮ್ಮಿಕೊಂಡು ಕೇಂದ್ರ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ಬಗ್ಗೆಯೂ ಸಮಾಲೋಚನೆ ಸಭೆಯಲ್ಲಿ ನಡೆಸಲಾಯಿತು.
ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜತೆ ಸೇರಿ 28ಕ್ಕೆ 28 ಸ್ಥಾನಗಳನ್ನು ಗೆಲ್ಲುವ ಬಗ್ಗೆಯೂ ಹೆಚ್ಚಿನ ಚರ್ಚೆಗಳಾಗಿದ್ದು, ಎಲ್ಲ ಲೋಕಸಭಾ ಕ್ಷೇತ್ರ, ಜಿಲ್ಲೆಗಳಲ್ಲಿ ಬೃಹತ್ ಸಮಾವೇಶ, ಕಾರ್ಯಕರ್ತರ ಸಭೆಗಳನ್ನು ನಡೆಸುವ ಬಗ್ಗೆಯೂ ಚರ್ಚೆ ನಡೆಸಲಾಯಿತು. ಬರುವ ಜನವರಿಯಿಂದಲೇ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಪಕ್ಷದ ಸಮಾವೇಶಗಳನ್ನು ನಡೆಸುವ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಹೇಳಲಾಗಿದೆ
ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ನಡೆಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಬರ ನಿರ್ವಹಣೆಯಲ್ಲಿ ರಾಜ್ಯಸರ್ಕಾರದ ವೈಫಲ್ಯ, ಸಚಿವರುಗಳ ಬೇಜವಾಬ್ದಾರಿ ಹೇಳಿಕೆ, ರೈತರ ಅವಹೇಳನ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ನಡೆಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆಗಳಾಗಿವೆ.
ಬರದಿಂದ ಬೆಳೆ ನಾಶವಾಗಿ ಸಾಲಬಾಧೆ ತಾಳಲಾರದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯಲು ರೈತರಿಗೆ ಧೈರ್ಯ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲು ಈ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಹೇಳಲಾಗಿದೆ. ಅನ್ನದಾತನ ಸಂಕಷ್ಟಕ್ಕೆ ಸ್ಪಂದಿಸಲು ವಿರೋಧ ಪಕ್ಷವಾಗಿ ಏನೆಲ್ಲ ಮಾಡಲು ಸಾಧ್ಯವೋ ಅದನ್ನು ಮಾಡುವ ಜತೆಗೆ ರೈತರಿಗೆ ಬರ ಪರಿಹಾರವನ್ನು ಸಕಾಲದಲ್ಲಿ ವಿತರಿಸುವಂತೆ ಕಾಂಗ್ರೆಸ್ ಸರ್ಕಾರದ ಮೇಲೆ ಒತ್ತಡ ಹೇರುವ ತೀರ್ಮಾನವನ್ನು ಸಭೆಯಲ್ಲಿ ಮಾಡಲಾಗಿದೆ.
ಸಭೆಯಲ್ಲಿ ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ. ರಾಜೇಶ್, ನೂತನ ಪ್ರಧಾನ ಕಾರ್ಯದರ್ಶಿಗಳಾದ ಸುನಿಲ್‌ಕುಮಾರ್, ಪ್ರೀತಂಗೌಡ, ಪಿ. ರಾಜೀವ್, ನಂದೀಶ್‌ರೆಡ್ಡಿ, ಎಂ. ರಾಜೇಂದ್ರ ಸೇರಿದಂತೆ ಎಲ್ಲ ನೂತನ ಉಪಾಧ್ಯಕ್ಷರು, ಕಾರ್ಯದರ್ಶಿಗಳು ಭಾಗಿಯಾಗಿದ್ದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಲು ಎಲ್ಲರೂ ಶ್ರಮವಹಿಸಬೇಕು ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ ವಿಜಯೆಂದ್ರ ಕರೆ ನೀಡಿದರು. ಬಿಜೆಪಿ ಕಚೇರಿಯಲ್ಲಿಂದು ನಡೆದ ನೂತನ ಪದಾಧಿಕಾರಿಗಳ ಮೊದಲ ಸಭೆಯಲ್ಲಿ ಮಾತನಾಡಿದ ಅವರು, ವಿರೋಧಿಗಳನ್ನು ಹಗುರವಾಗಿ ಪರಿಗಣಿಸದೆ ಪ್ರತಿಯೊಬ್ಬರೂ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮವಿಟ್ಟು ಕೆಲಸ ಮಾಡಬೇಕು ಎಂದು ನೂತನ ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು.
ರಾಜ್ಯ ಮತ್ತು ದೇಶದಲ್ಲಿ ಬಿಜೆಪಿ ಪರ ಅಲೆ ಇದೆ. ಆದರೂ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಇರುವುದರಿಂದ ವಿರೋಧಿಗಳನ್ನು ಹಗುರವಾಗಿ ತೆಗೆದುಕೊಳ್ಳದೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಒಗ್ಗೂಡಿ ಕೆಲಸ ಮಾಡುವಂತೆ ಅವರು ಕರೆ ನೀಡಿದರು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಮನೆ ಬಾಗಿಲಿಗೆ ಸವಲತ್ತುಗಳನ್ನು ತಲುಪಿಸಿದೆ. ಸ್ವತಂತ್ರ ಬಂದ ಬಳಿಕ ಯಾವುದೇ ಸರ್ಕಾರಗಳು ಈ ಕೆಲಸ ಮಾಡಿರಲಿಲ್ಲ. ಕೇಂದ್ರ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸಬೇಕಾದ ಕೆಲಸ ಆಗಬೇಕಿದೆ ಎಂದರು
ಬಿಬಿಎಂಪಿ ಸೇರಿದಂತೆ ಮುಂಬರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿ ಚುನಾವಣೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯತೆಯನ್ನು ಅವರು ಪ್ರತಿಪಾದಿಸಿದರು.
ಅತ್ಯಂತ ಪ್ರಮುಖ ಕಾಲಘಟ್ಟದಲ್ಲಿ ನಮ್ಮೆಲ್ಲರಿಗೂ ಪಕ್ಷದ ರಾಜ್ಯ ಪದಾಧಿಕಾರಿಗಳಾಗಿ ಕೆಲಸ ಮಾಡುವ ಜವಾಬ್ದಾರಿ ಸಿಕ್ಕಿದೆ. ನಾವೆಲ್ಲರೂ ಹೊಣೆ ಅರಿತು ಕರ್ತವ್ಯ ನಿರ್ವಹಿಸಬೇಕು ಎಂದರು.
ಮುಂದಿನ ಲೋಕಸಭಾ ಚುನಾವಣೆವರೆಗೂ ವಿಶ್ರಾಂತಿ ಪಡೆಯುವ ಪ್ರಶ್ನೆಯೇ ಇಲ್ಲ. ಹಬ್ಬ ಹರಿದಿನ, ಭಾನುವಾರ, ಕುಟುಂಬ ಎಲ್ಲವನ್ನೂ ಬದಿಗಿಟ್ಟು ಗುರಿ ಮುಟ್ಟುವ ತನಕ ಕೆಲಸ ಮಾಡೋಣ ಎಂದು ಅವರು ಪದಾಧಿಕಾರಿಗಳಿಗೆ ಹೇಳಿದರು.
ಪ್ರಧಾನಿ ಮೋದಿ ಅವರು ಕಳೆದ ಬಂಬತ್ತೂವರೆ ವರ್ಷಗಳಿಂದ ವಿಶ್ರಾಂತಿ ಪಡೆಯದೆ ಅವಿರತವಾಗಿ ದೇಶ ಸೇವೆ ಮಾಡುತ್ತಿದ್ದಾರೆ. ಅದೇ ರೀತಿ ನಾವುಗಳು ಕೂಡ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಜಾತಿರಹಿತವಾಗಿ ಬಿಜೆಪಿ ಹಿಂದುತ್ವದಡಿ ಒಂದು ತಂಡವಾಗಿ ಕೆಲಸ ಮಾಡೋಣ ಎಂದರು.






