ಕಾಪುವಿನಲ್ಲಿ ಭೀಕರ ಅಪಘಾತ: ಗೂಡ್ಸ್ ಟೆಂಪೋ ಪಲ್ಟಿಯಾಗಿ ಐವರು ಸಾವು
Views: 325
ಕನ್ನಡ ಕರಾವಳಿ ಸುದ್ದಿ: ಕಾರ್ಯಕ್ರಮವೊಂದಕ್ಕೆ ಸಾಮಗ್ರಿಗಳನ್ನು ತುಂಬಿಕೊಂಡು ಸಾಗಿಸುತ್ತಿದ್ದ ಗೂಡ್ಸ್ ಟೆಂಪೋವೊಂದು ಪಲ್ಟಿಯಾದ ಘಟನೆ ಕಾಪು ಸಮೀಪದ ಕೋತಲ್‌ಕಟ್ಟೆ ರಾಷ್ಟ್ರೀಯ ಹೆದ್ದಾರಿಯ 66ರಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. ಪ್ರಕರಣದಲ್ಲಿ ಐವರು ಮೃತಪಟ್ಟಿದ್ದು, ಹಲವರಿಗೆ ಗಂಭೀರ ಗಾಯವಾಗಿದೆ.
ಪಶ್ಚಿಮ ಬಂಗಾಳದ ಮೂವರು ಹಾಗೂ ಬಿಹಾರದ ಇಬ್ಬರು ಘಟನೆಯಿಂದ ಮೃತಪಟ್ಟಿದ್ದಾರೆ. ಕಾಪು ಮಜೂರು ನಿವಾಸಿ ರಂಜಿತ್ (33), ಪಶ್ಚಿಮ ಬಂಗಾಳ ಮೂಲದವರಾದ ಪ್ರಬಾಸ್ ರಾಯ್ (26), ಗೋಪಾಲ್ ಭೌಮಿಕ್ (16 ) ಸೇರಿ ಏಳು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮೃತರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ.
ಇನ್ನು ಟೆಂಪೋ ಕಾಪು ಮಜೂರಿನಿಂದ ಮಲ್ಪೆಗೆ ಡೆಕರೋಷನ್ ಕೆಲಸಕ್ಕೆ ಬೇಕಾದ ಸಲಕರಣೆಗಳನ್ನು ಸಾಗಿಸುತ್ತಿತ್ತು. ವಾಹನದಲ್ಲಿ ಒಟ್ಟು 12 ಮಂದಿ ಕಾರ್ಮಿಕರಿದ್ದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ, ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ ರಸ್ತೆಯ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅಪಘಾತದ ತೀವ್ರತೆಗೆ ಟೆಂಪೋದಲ್ಲಿದ್ದ ಭಾರವಾದ ಕಬ್ಬಿಣದ ಸಲಕರಣೆಗಳು ಕಾರ್ಮಿಕರ ಮೇಲೆ ಬಿದ್ದಿವೆ. ಈ ಪರಿಕರಗಳ ನಡುವೆ ಸಿಲುಕಿ ಉಸಿರುಗಟ್ಟಿ ಐವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.






