ಕಾಂತಾರ ಸಿನಿಮಾ ಟಿಕೆಟ್ ಸಿಗದೆ ಕಾಲುವೆಗೆ ಈಜುಲು ಹೋಗಿ ಇಬ್ಬರು ಯುವಕರು ನೀರುಪಾಲು
Views: 77
ಕನ್ನಡ ಕರಾವಳಿ ಸುದ್ದಿ: ರಾಯಚೂರು ಜಿಲ್ಲೆಯ ಮಸ್ಕಿ ಬಳಿ ‘ಕಾಂತಾರ’ ಸಿನಿಮಾ ನೋಡಲು ಬಂದಿದ್ದ ಇಬ್ಬರು ಯುವಕರು ಕಾಲುವೆಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಟಿಕೆಟ್ ಸಿಗದ ಕಾರಣ ಸಮಯ ಕಳೆಯಲು ಈಜಲು ಹೋಗಿದ್ದಾಗ, ಈಜು ಬಾರದ ಸ್ನೇಹಿತನನ್ನು ರಕ್ಷಿಸಲು ಹೋಗಿ ಮತ್ತೊಬ್ಬನೂ ಪ್ರಾಣ ಕಳೆದುಕೊಂಡಿದ್ದಾನೆ.
ವೆಂಕಟೇಶ (28) ಮತ್ತು ಯಲ್ಲಾಲಿಂಗ (28) ಮೃತ ದುರ್ದೈವಿಗಳು, ಯುವಕರಿಬ್ಬರೂ ಮುದಗಲ್ ಪಟ್ಟಣದವರೆಂದು ಗುರುತಿಸಲಾಗಿದೆ.
ಇಬ್ಬರು ಸ್ನೇಹಿತರು ಇಂದು ಮಸ್ಕಿ ಪಟ್ಟಣಕ್ಕೆ ‘ಕಾಂತಾರಾ’ ಸಿನಿಮಾ ವೀಕ್ಷಣೆಗೆಂದು ಬಂದಿದ್ದರು. ಆದರೆ, ಮಧ್ಯಾಹ್ನದ ಶೋಗೆ ಟಿಕೆಟ್ ಸಿಗದ ಕಾರಣ, ಸಂಜೆಯ ಶೋಗೆ ಯೋಜನೆ ಹಾಕಿದ್ದರು. ಸಂಜೆವರೆಗೆ ಸಮಯ ಕಳೆಯಲು ಇಬ್ಬರೂ ಸಮೀಪದ ಕಾಲುವೆಯಲ್ಲಿ ಈಜಲು ಹೋಗಿದ್ದರು. ಕಾಲುವೆಯಲ್ಲಿ ಈಜಾಡುವ ವೇಳೆ ಈಜುಬಾರದ ಯಲ್ಲಾಲಿಂಗ ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗುತ್ತಿದ್ದಾಗ, ಅವನನ್ನು ರಕ್ಷಿಸಲು ಹೋದ ವೆಂಕಟೇಶ ಕೂಡ ದುರಂತಕ್ಕೀಡಾಗಿ ನೀರಿನಲ್ಲಿ ಮುಳುಗಿದ್ದಾನೆ.
ಮೃತದೇಹಗಳು ಸಿರವಾರದ ಬಳಿ ಕಾಲುವೆಯಲ್ಲಿ ಪತ್ತೆಯಾಗಿದ್ದು, ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದ್ದು, ಯುವಕರ ಕುಟುಂಬಸ್ಥರ ಅಕ್ರಂದನ ಮುಗಿಲುಮುಟ್ಟಿದೆ.






