ಕಾಂತಾರ ದೈವವನ್ನು ‘ದೆವ್ವ’ ಎಂದು ಅವಹೇಳನ.. ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ ಭುಗಿಲೆದ್ದ ಆಕ್ರೋಶ!
Views: 96
ಕನ್ನಡ ಕರಾವಳಿ ಸುದ್ದಿ: ತುಳುನಾಡಿನ ದೈವಕ್ಕೆ ಬಾಲಿವುಡ್ ನಟ ರಣವೀರ್ ಸಿಂಗ್ ಅವಮಾನ ಮಾಡಿದ್ದಾರೆ. ಗೋವಾದಲ್ಲಿ ನಡೆದ 56ನೇ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ರಣವೀರ್ ಸಿಂಗ್, ಚಾವುಂಡಿ ದೈವ ಆವಾಹನೆಯನ್ನ ಅಣಕಿಸಿದ್ದರು.
ಬಳಿಕ ಚಾವುಂಡಿ ದೈವ ಅನ್ನೋ ಬದಲು ದೆವ್ವ ಅಂತ ಹೇಳಿ ಯಡವಟ್ಟು ಮಾಡಿದ್ದಾರೆ. ರಣವೀರ್ ಸಿಂಗ್ ‘ದೆವ್ವ’ದ ಮಾತಿಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ನಗುತ್ತಾ ಕುಳಿತಿದ್ದ ರಿಷಬ್ ಶೆಟ್ಟಿ ನಡೆ ಬಗ್ಗೆಯೂ ಬೇಸರ ವ್ಯಕ್ತವಾಗಿದೆ.
ಭುಗಿಲೆದ ಭಾರೀ ವಿರೋಧ
ರಣವೀರ್ ಸಿಂಗ್ ಅನುಕರಣೆ ವೇಳೆ, ಕೆಟ್ಟದಾಗಿ ಹೋ… ಎಂದು ಕಿರುಚುತ್ತಾ… ತಲೆಯನ್ನು ಗಡಗಡನೆ ನಡುಗಿಸಿ, ನಾಲಗೆ ಹೊರಗೆ ಚಾಚಿ, ಕೆಟ್ಟದಾಗಿ ನಟಿಸಿ ತೋರಿಸಿದ್ದಾರೆ. ಅದು ಸಭಿಕರಿಗೆ ಇಷ್ಟವಾಗಿಲ್ಲ. ಅವರು ಹೊಗಳುತ್ತಿದ್ದಾರೋ, ತೆಗಳುತ್ತಿದ್ದಾರೋ ಎಂಬ ಅನುಮಾನ ಮನಸ್ಸಿನಲ್ಲಿ ಇಣುಕುವಂತೆ ಮಾಡಿದೆ.
ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ ದೈವ ನರ್ತಕ ದಯಾನಂದ ಕತ್ತಲ್ಸರ್ ಬೇಸರ ವ್ಯಕ್ತಪಡಿಸಿದ್ದಾರೆ. ಚಾವುಂಡಿ ದೈವ ಆವಾಹನೆ ಅನುಕರಣೆ ಮಾಡಿ ಅವಮಾನಿಸಿದಕ್ಕೆ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ, ದಯಾನಂದ ಕತ್ತಲ್ಸರ್ ಆಕ್ರೋಶ ಹೊರಹಾಕಿದ್ದಾರೆ.
ತುಳುನಾಡಿದ ದೈವಗಳಿಗೆ ನಿರಂತರ ಅವಮಾನ ಮಾಡಲಾಗುತ್ತಿದೆ. ಇದರಿಂದ ಮನಸ್ಸಿಗೆ ಬಹಳ ನೋವಾಗುತ್ತಿದೆ ಅಲ್ಲದೇ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಇದ್ದರೂ ಅದಕ್ಕೆ ವಿರೋಧಿಸದಿರುವುದು ಖಂಡನೀಯ ಎಂದು ಕಿಡಿಕಾರಿದ್ದಾರೆ.
ನೆಲಕ್ಕೆ ಮತ್ತು ಆರಾಧನೆ ಮಾಡಿದ ದೊಡ್ಡ ಅಪಮಾನ. ನಮ್ಮದು ಸತ್ಯಾರಾಧನೆ. ದೆವ್ವಾರಾಧನೆ ಅಲ್ಲ. ಅವಮಾನ ಮಾಡಿದ್ದು ಅವರು. ಆದರೆ ಅದು ಅವರಿಗೆ ಗೊತ್ತಿಲ್ಲ, ಸರಿ. ನಮ್ಮವರಿಗೆ ಗೊತ್ತಾಗಲ್ವಾ? ನಮ್ಮವರಿಗೆ ಭಾಷೆ ಇಲ್ವಾ? ನಮ್ಮವರು ಅದನ್ನು ಭೂತಾರಾಧನೆ, ಭೂತಾರಾಧನೆ ಎಂದರೆ ನಾನು ಹೇಳಬೇಕು. ಅದು ಭೂತಾರಾಧನೆ ಅಲ್ಲ ಎಂದು ಹೇಳ್ತಿದ್ದೇನೆ. ಇದು ಭೂತಾರಾಧನೆ ಎಂದು ತುಳಿತಕ್ಕೆ ಒಳಗಾಗಿಸುತ್ತಿದ್ದಾರೆ. ರಣವೀರ್ ಸಿಂಗ್, ದೆವ್ವ ಎನ್ನುವಾಗ ಚಪ್ಪಾಳೆ ತಟ್ಟುವಂತದ್ದಲ್ಲ. ಅದು ಪ್ರೇತ ಅಲ್ಲ. ನಗುವಂತದ್ದು ಅಲ್ಲ ಎಂದು ನೇರವಾಗಿ ರಿಷಬ್ ಶೆಟ್ಟಿಗೆ ಟಾಂಗ್ ನೀಡಿದ್ದಾರೆ.
ಆದರೆ, ಇದು ನೆಟ್ಟಿಗರನ್ನು ತೀವ್ರವಾಗಿ ಕೆರಳಿಸಿದೆ. ಇದು ನಟನೆಯ ಅನುಕರಣೆಯಲ್ಲ, ‘ದೈವ’ವನ್ನು ‘ದೆವ್ವ’ ಎಂದು ಹೇಳಿದ ಹಾಗಿದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಅನೇಕರು ರಣವೀರ್ ಸಿಂಗ್ ಅವರ ವರ್ತನೆಯನ್ನು ಖಂಡಿಸಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಜನರು ರಣವೀರ್ ಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.






