ಕರ್ನಾಟಕ ಬಂದ್ ಶಾಂತಿಯುತ, ಉತ್ತಮ ಪ್ರತಿಕ್ರಿಯೆ

Views: 1

ಬೆಂಗಳೂರು:ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದನ್ನು ವಿರೋಧಿಸಿ ಕನ್ನಡ ಒಕ್ಕೂಟದ ಬಂದ್ ಕರೆಗೆ ರಾಜ್ಯದ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಂದ್ ಶಾಂತಿಯುತವಾಗಿ ನಡೆದಿದ್ದು, ಎಲ್ಲೂ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ. ಆದರೆ, ಎಲ್ಲೆಡೆ ಪ್ರತಿಭಟನಾ ಧರಣಿಗಳು ನಡೆದಿದ್ದು, ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ಕೋಲಾರ, ಚಿತ್ರದುರ್ಗ, ತುಮಕೂರು, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಬಂದ್ ಯಶಸ್ವಿಯಾಗಿದೆ. ಉಳಿದಂತೆ ದಾವಣಗೆರೆ, ಬಿಜಾಪುರ, ಬಾಗಲಕೋಟೆ, ಶಿವಮೊಗ್ಗ, ರಾಯಚೂರು, ಕೊಪ್ಪಳ, ಬಳ್ಳಾರಿ, ಬೀದರ್, ಬೆಳಗಾವಿ, ಗದಗ, ಕಲಬುರಗಿ, ಹಾವೇರಿ ಜಿಲ್ಲೆಗಳಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ಬಂದ್‌ಗೆ ಅಷ್ಟೇನು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
ಕರ್ನಾಟಕ ಬಂದ್‌ನಿಂದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡಿವೆ.
ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಲಾಗಿದೆ. ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿದ್ದು, ಸಾರಿಗೆ ಬಸ್‌ಗಳು ಓಡಾಡುತ್ತಿದ್ದರೂ ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆ ಇದ್ದು, ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿವೆ. ಜನ ಸಂಚಾರವೂ ವಿರಳವಾಗಿದ್ದು, ಹಳೆ ಮೈಸೂರು ಭಾಗದ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸರ್ಕಾರಿ ಕಚೇರಿಗಳು ತೆರೆದಿವೆಯಾದರೂ ಹಾಜರಾತಿ ಕಡಿಮೆ ಇದೆ.
ಕರ್ನಾಟಕ ಬಂದ್‌ಗೆ ಕನ್ನಡ ಚಿತ್ರೋದ್ಯಮ, ವಾಣಿಜ್ಯ ಸಂಘ-ಸಂಸ್ಥೆಗಳು, ವರ್ತಕರ ಸಂಘ, ಆಭರಣ ಅಂಗಡಿ ಮಾಲೀಕರ ಸಂಘ, ಖಾಸಗಿ ವಾಹನಗಳ ಸಂಘ, ಆಟೋರಿಕ್ಷಾ, ಟ್ಯಾಕ್ಸಿ ಸಂಘಟನೆಗಳು ಬೆಂಬಲ ನೀಡಿರುವುದರಿಂದ ಎಲ್ಲೆಡೆ ಥಿಯೇಟರ್‌ಗಳು ಬಂದ್ ಆಗಿವೆ. ಚಿತ್ರೋದ್ಯಮದ ಚಟುವಟಿಕೆಗಳು ಸ್ಥಗಿತಗೊಂಡಿವೆ. ಆಟೋ, ಟ್ಯಾಕ್ಸಿ ಓಡಾಟವೂ ಬಂದ್ ಆಗಿದ್ದು, ಬೆಳಿಗ್ಗೆ ಪರ ಊರಿನಿಂದ ಬಂದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದರು. ವಿಮಾನನಿಲ್ದಾಣಕ್ಕೆ ತೆರಳುವ ಪ್ರಯಾಣಿಕರು ಟ್ಯಾಕ್ಸಿಗಳಿಲ್ಲದೆ ಪರದಾಡುವಂತಾಗಿದೆ.
ಪ್ರತಿಭಟನೆ ಜೋರು, ಬಿಗಿ ಭದ್ರತೆ ಬಂದ್‌ನ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪ್ರತಿಭಟನಾ ಧರಣಿ ಪ್ರತಿಭಟನೆಗಳು ನಡೆದಿದ್ದು, ಕನ್ನಡ ಪರ ಸಂಘಟನೆಗಳೂ ಸೇರಿದಂತೆ ವಿವಿಧ ಸಂಘಟನೆಗಳು ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ, ರಾಜಧಾನಿ ಬೆಂಗಳೂರಿನಲ್ಲಿ ಟೌನ್‌ಹಾಲ್‌ನಿಂದ ಸ್ವತಂತ್ರ ಉದ್ಯಾನದವರೆಗೂ ಕನ್ನಡ ಒಕ್ಕೂಟ ವಾಟಾಳ್ ನಾಗರಾಜ್‌ರವರ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದ್ದು, ಎಲ್ಲ ಪ್ರಮುಖ ಕನ್ನಡ ಪರ ಸಂಘಟನೆಗಳ ಮುಖಂಡರುಗಳು ಈ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ.ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಸಹ ಪ್ರತಿಭಟನಾ ಧರಣಿ ನಡೆಸಿದ್ದು, ಈ ಧರಣಿ ನಟ ಶಿವರಾಜ್‌ಕುಮಾರ್‌ರವರ ನೇತೃತ್ವದಲ್ಲಿ ನಡೆದಿದ್ದು, ಕನ್ನಡ ಚಿತ್ರರಂಗದ ನಟ -ನಟಿಯರು, ಕಲಾವಿದರು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಪಕ್ಕದಲ್ಲಿರುವ ಗುರುರಾಜ ಕಲ್ಯಾಣ ಮಂಟಪದ ಆವರಣದಲ್ಲಿ ನಡೆದಿರುವ ಪ್ರತಿಭಟನೆಯಲ್ಲಿ ಭಾಗಿಯಾದರು.
ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲೂ ಕನ್ನಡ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದರು.ಚಿಕ್ಕಮಗಳೂರು, ತುಮಕೂರು, ದಾವಣಗೆರೆ, ಚಿತ್ರದುರ್ಗ, ಬಿಜಾಪುರ, ಶಿವಮೊಗ್ಗ, ಗದಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಾವೇರಿ ಪರವಾದ ಪ್ರತಿಭಟನೆ ನಡೆದಿದ್ದು, ಧಾರವಾಡದ ಜುಬಿಲಿ ಸರ್ಕಲ್‌ನಲ್ಲಿ ರಸ್ತೆ ತಡೆ ನಡೆಸಲಾಯಿತು. ಚಿತ್ರದುರ್ಗದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್‌ಶೆಟ್ಟಿ ಬಣ ಸಂಸದರ ಅಣಕು ಶವಯಾತ್ರೆ ನಡೆಸಲು ಪ್ರಯತ್ನಿಸಿದ್ದು, ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.ಚಿತ್ರದುರ್ಗದ ಗಾಂಧಿ ವೃತ್ತದಲ್ಲಿ ವಿಜಯ ಸೇನೆ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಚಿತ್ರದ ಮೇಲೆ ರಕ್ತ ಚೆಲ್ಲಿ ಆಕ್ರೋಶ ಹೊರ ಹಾಕಿದರು. ಗದಗ ಜಿಲ್ಲೆಯಲ್ಲೂ ಕಾವೇರಿ ಕಿಚ್ಚು ಜೋರಾಗಿದ್ದು, ಜಯಕರ್ನಾಟಕ ಕಾರ್ಯಕರ್ತರು ರಾಜ್ಯದ ೨೮ ಸಂಸದರಿಗೆ ಶ್ರದ್ಧಾಂಜಲಿ ಅರ್ಪಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿ ಸಂಸದರು ಜೀವಂತವಿದ್ದರೂ ರಾಜ್ಯದ ಪಾಲಿಗೆ ಸತ್ತು ಹೋಗಿದ್ದಾರೆ ಎಂದು ಬಾಯಿ ಬಡಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.ತುಮಕೂರಿನ ಟೌನ್‌ಹಾಲ್ ಬಳಿ ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ನಡೆಸಿ ಕಾವೇರಿ ನೀರು ಬಿಡುಗಡೆಗೆ ಆಕ್ರೋಶ ವ್ಯಕ್ತಪಡಿಸಿದರು, ಮಂಡ್ಯದಲ್ಲೂ ಕಾವೇರಿ ಹೋರಾಟ ಜೋರಾಗಿದ್ದು, ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರೊಬ್ಬರು ಕೈ ಕುಯ್ದುಕೊಂಡು ಪ್ರತಿಭಟನೆ ನಡೆಸಿದ್ದು ತಕ್ಷಣ ಕಾರ್ಯಕರ್ತರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದೆ.ಕೋಲಾರದಲ್ಲೂ ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದನ್ನು ಪ್ರತಿಭಟಿಸಿ ಕನ್ನಡ ಪರ ಹೋರಾಟಗಾರರು ಬೈಕ್ ರ್‍ಯಾಲಿ ನಡೆಸಿದರು.
ಕರ್ನಾಟಕ ಬಂದ್ ಬೆಂಗಳೂರು ಸ್ತಬ್ಧ
ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದನ್ನು ವಿರೋಧಿಸಿ ಇಂದು ನಡೆದಿರುವ ಕರ್ನಾಟಕ ಬಂದ್‌ನ ಕಾವು ರಾಜಧಾನಿ ಬೆಂಗಳೂರಿನಲ್ಲಿ ಜೋರಾಗಿದ್ದು, ಎಲ್ಲ ರೀತಿಯ ವಾಣಿಜ್ಯ ವಹಿವಾಟುಗಳು ಸ್ಥಗಿತಗೊಂಡು ಅಂಗಡಿ ಮುಂಗಟ್ಟುಗಳು ಮುಚ್ಚಿವೆ. ಕರ್ನಾಟಕ ಬಂದ್‌ಗೆ ಬೆಂಗಳೂರಿನ ನಾಗರಿಕರು ಸಂಪೂರ್ಣ ಬೆಂಬಲ ನೀಡಿದ್ದು, ಇಡೀ ಬೆಂಗಳೂರು ಸ್ತಬ್ಧಗೊಂಡಿದೆ.ಬೆಂಗಳೂರಿನಲ್ಲಿ ವಾಹನಗಳ ಓಡಾಟವೂ ಸ್ಥಗಿತಗೊಂಡಿದ್ದು, ಅಲ್ಲೊಂದು ಇಲ್ಲೊಂದು ವಾಹನಗಳು ಓಡಾಡುತ್ತಿವೆ. ರಸ್ತೆಗಳಲ್ಲೂ ಜನಸಂಚಾರ ವಿರಳವಾಗಿದೆ. ಬಿಎಂಟಿಸಿ ಬಸ್‌ಗಳಿದ್ದರೂ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವುದರಿಂದ ಬಸ್‌ಗಳ ಓಡಾಟವೂ ಕಡಿಮೆ ಇದೆ. ಆಟೋ ಟ್ಯಾಕ್ಸಿ ಎಲ್ಲವೂ ಬಂದ್ ಆಗಿದೆ. ಮೆಟ್ರೊ ಸಂಚಾರ ಇದೆಯಾದರೂ ಪ್ರಯಾಣಿಸುವವರ ಸಂಖ್ಯೆ ತೀರಾ ಕಡಿಮೆ ಇದೆ.ಬೆಂಗಳೂರಿನ ಎಲ್ಲೆಡೆ ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಮುಚ್ಚಿ ಬಂದ್‌ಗೆ ಬೆಂಬಲ ನೀಡಲಾಗಿದೆ. ರೈಲು ಮುಖಾಂತರ ಬೆಂಗಳೂರಿಗೆ ಆಗಮಿಸಿರುವ ಪ್ರಯಾಣಿಕರು ಆಟೋ, ಟ್ಯಾಕ್ಸಿಗಳಿಲ್ಲದೆ ತೊಂದರೆಗೆ ಸಿಲುಕಿದರು. ಬಂದ್‌ನಿಂದಾಗಿ ವಿಮಾನನಿಲ್ದಾಣಕ್ಕೆ ತೆರಳುವ ಪ್ರಯಾಣಿಕರಿಗೆ ತೊಂದರೆಯಾಗಿದ್ದು, ಹಲವು ವಿಮಾನಗಳ ಸಂಚಾರವನ್ನೇ ರದ್ದು ಮಾಡಲಾಗಿದೆ, ಬೆಂಗಳೂರಿನಲ್ಲಿ ಚಿತ್ರಮಂದಿರ, ಮಾಲ್, ಹೋಟೆಲ್‌ಗಳು ಬಾಗಿಲು ಹಾಕಿವೆ.
ಬೆಂಗಳೂರಿನ ಹಲವೆಡೆ ಕನ್ನಡ ಪರ ಕಾರ್ಯಕರ್ತರು ಧರಣಿ, ಪ್ರತಿಭಟನೆ, ಮೆರವಣಿಗೆಗಳನ್ನು ನಡೆಸಿ ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬೆಂಗಳೂರಿನ ವಿವಿಧೆಡೆ ಕನ್ನಡ ಪರ ಸಂಘಟನೆಗಳು, ಬೈಕ್ ರ್‍ಯಾಲಿ ಸಹ ನಡೆಸಿದ್ದು, ಕೆಪಿಸಿಸಿ ಕಚೇರಿ ಎದುರು ಬೈಕ್‌ನಲ್ಲಿ ಬಂದ ಕನ್ನಡ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕಾವೇರಿ ನಮ್ಮದು ಎಂಬ ಘೋಷಣೆ ಕೂಗಿದ್ದಾರೆ. ಸ್ವತಂತ್ರ ಉದ್ಯಾನದಲ್ಲೂ ಜನಶಕ್ತಿ ಕೇಂದ್ರದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.






