ಕರಾವಳಿ ಮೂಲದ ಡಾ.ಶೃತಿ ಹೆಗಡೆ 40 ದೇಶಗಳ ಸುಂದರಿಯರನ್ನು ಹಿಂದಿಕ್ಕಿ ಮಿಸ್ ಯುನಿವರ್ಸಲ್ ಪ್ರಶಸ್ತಿ

Views: 122
ಉತ್ತರ ಕನ್ನಡ: ಅಮೆರಿಕದ ಫ್ಲೋರಿಡಾದಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಶಿರಸಿ ಮೂಲದ ಡಾ. ಶೃತಿ ಹೆಗಡೆ ಮಿಸ್ ಯುನಿವರ್ಸಲ್ ಪೆಟೀಟ್ 2024 ಆಗಿ ಹೊರಹೊಮ್ಮಿದ್ದಾರೆ.
ಶಿರಸಿ ತಾಲೂಕಿನ ಮುಂಡಿಗೆಸರ ಮೂಲದ ಪ್ರಸ್ತುತ ಹುಬ್ಬಳ್ಳಿಯಲ್ಲಿ ನೆಲೆಸಿರುವ ಕೃಷ್ಣ ಹೆಗಡೆ, ಕಮಲಾ ದಂಪತಿಯ ಪುತ್ರಿ ಅಮೆರಿಕದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ.

ಇವರು ಮೊದಲು 2018ರಲ್ಲಿ ಮಿಸ್ ಕರ್ನಾಟಕ ರನ್ನರ್ ಅಪ್, ಮಿಸ್ ಸೌತ್ ಇಂಡಿಯಾ ವಿಜೇತರಾಗಿದ್ದರು. 2023ರಲ್ಲಿ ಮಿಸ್ ಏಷ್ಯಾ ಇಂಟರ್ ನ್ಯಾಷನಲ್ ಇಂಡಿಯಾ ಪ್ರಶಸ್ತಿ ಗೆದ್ದಿದ್ದರು. ಇದೀಗ ಅಮೆರಿಕದಲ್ಲಿ ನಡೆದ ಮಿಸ್ ಯುನಿವರ್ಸಲ್ ಪೆಟೀಟ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಹಲವು ದೇಶಗಳ ಸುಂದರಿಯರನ್ನು ಹಿಂದಿಕ್ಕಿದ ಡಾ. ಶೃತಿ; ಅಮೆರಿಕದ ಫ್ಲೋರಿಡಾದಲ್ಲಿ ಜೂ. 6 ರಿಂದ 10ರ ವರೆಗೆ ಆಯೋಜಿಸಿದ್ದ ಈ ಸೌಂದರ್ಯ ಸ್ಪರ್ಧೆಯಲ್ಲಿ ಭಾರತ ಸೇರಿದಂತೆ ಒಟ್ಟು 40 ದೇಶಗಳ ಸುಂದರಿಯರು ಪೈಪೋಟಿಯಲ್ಲಿದ್ದರು. ರಾಷ್ಟ್ರೀಯ ಉಡುಗೆ, ಈಜು ಉಡುಗೆ, ಪ್ರಶ್ನೋತ್ತರ, ವೈಯಕ್ತಿಕ ಸಂದರ್ಶನ ಮುಂತಾದ ವಿವಿಧ ಸುತ್ತುಗಳಲ್ಲಿ ಸ್ಪರ್ಧೆ ನಡೆದಿತ್ತು. ಎಲ್ಲದರಲ್ಲೂ ಉತ್ತಮ ಪ್ರದರ್ಶನ ನೀಡಿ, ಶೃತಿ ಹೆಗಡೆ ಗೆಲುವು ಸಾಧಿಸಿದ್ದಾರೆ.

ಬಹುಮುಖ ಪ್ರತಿಭೆ ಡಾ. ಶೃತಿ ಹೆಗಡೆ; ಹುಬ್ಬಳ್ಳಿಯಲ್ಲಿಯೇ ಎಂಬಿಬಿಎಸ್ ಪೂರೈಸಿರುವ ಡಾ. ಶೃತಿ ಹೆಗಡೆ, ಚರ್ಮ ರೋಗ ತಜ್ಞೆಯಾಗುವ ಹಂಬಲದಿಂದ ತುಮಕೂರಿನಲ್ಲಿ ಎಂ.ಡಿ. ಅಧ್ಯಯನ ಮಾಡುತ್ತಿದ್ದಾರೆ. ಇವರು ಭರತನಾಟ್ಯ ಕಲಾವಿದೆಯೂ ಆಗಿದ್ದು, ದುಬೈ, ಮಾಲ್ಡೀವ್ಸ್, ಭೂತಾನ್ ಮುಂತಾದ ದೇಶಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಕೆಲವು ಧಾರಾವಾಹಿ, ಕನ್ನಡ ಚಲನಚಿತ್ರ, ವೆಬ್ ಸಿರೀಸ್ ಗಳಲ್ಲೂ ನಟಿಸಿದ್ದಾರೆ.






