ಕರಾವಳಿಯಲ್ಲಿ ಸಿಡಿಲಬ್ಬರದ ಧಾರಾಕಾರ ಮಳೆ:ಇನ್ನೂ 2 ದಿನ ಎಲ್ಲೋ ಅಲರ್ಟ್

Views: 0
ಮಂಗಳೂರು,ಉಡುಪಿ: ಕರಾವಳಿ ಭಾಗದಲ್ಲಿ ಹಿಂಗಾರು ಚುರುಕುಗೊಂಡಿದ್ದು, ಹಲವು ಕಡೆ ಗಳಲ್ಲಿ ರವಿವಾರ ಗುಡುಗು, ಸಿಡಿಲು ಸಹಿತ ಉತ್ತಮ ಮಳೆಯಾಗಿದೆ.
ಕರಾವಳಿ ತೀರದ ಮಂಗಳೂರು, ಪುತ್ತೂರು, ಕಡಬ, ಸುಳ್ಯ, ಬೆಳ್ತಂಗಡಿ, ಮೂಡುಬಿದಿರೆ ಸಹಿತ ದ.ಕ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸಂಜೆ ಬಳಿಕ ಗುಡುಗು ಸಹಿತ ಉತ್ತಮ ಮಳೆ ಸುರಿದಿದೆ.
ಗುಡುಗು,ಮಿಂಚಿನಿಂದ ರವಿವಾರ ರಾತ್ರಿ ವಿದ್ಯುತ್ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ.
ಮಣಿಪಾಲ, ಪಡುಬಿದ್ರಿ, ಕಾಪು, ಕಟಪಾಡಿ, ಉದ್ಯಾವರ, ಬ್ರಹ್ಮಾವರ, ಕೋಟ, ಸಾಲಿಗ್ರಾಮ, ಕುಂದಾಪುರ, ಬೈಂದೂರು, ಕಾರ್ಕಳ, ಹೆಬ್ರಿ ಸಹಿತ ಉಡುಪಿ ಜಿಲ್ಲೆ ವಿವಿಧೆಗಳಲ್ಲಿ ಸಂಜೆ, ರಾತ್ರಿ ಮಳೆ ಸುರಿಯಿತು.
ಕುಂದಾಪುರದಲ್ಲಿ ಕಳೆದ 2 ದಿನಗಳಿಂದ ವಿಪರೀತ ಸೆಖೆ ಯಿಂದ ಕೂಡಿದ್ದು, ರವಿವಾರ ಸಂಜೆ ಸುರಿದ ಮಳೆ ಬೆಳಿಗ್ಗೆಯವರೆಗೂ ಮುಂದುವರಿದು ಭತ್ತದ ಕೊಯಿಲು ಮಾಡಿದವರು ಗದ್ದೆಯಲ್ಲಿ ಒದ್ದೆಯಾಗಿ ಕೃಷಿಕರು ತೊಂದರೆ ಅನುಭವಿಸುವಂತಾಗಿದೆ.
ಇನ್ನೂ 2 ದಿನ ಮಳೆ ಸಾಧ್ಯತೆ
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ನ. 6ರಿಂದ 8ರ ವರೆಗೆ ಎಲ್ಲೋ ಅಲರ್ಟ್ ಘೋಷಿಸಿದ್ದು, ಮಳೆ ಮುಂದುವರಿಯುವ ಸಾಧ್ಯತೆ ಇದೆ. ಮಂಗಳೂರಿನಲ್ಲಿ 30.1 ಡಿ.ಸೆ. ಗರಿಷ್ಠ ಮತ್ತು 24.1 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು.