ಕರಾವಳಿಯಲ್ಲಿ ಫೆಂಗಲ್ ಚಂಡಮಾರುತದ ಅಬ್ಬರ, ಭಾರೀ ಮಳೆಗೆ ಹಾನಿ

Views: 84
ಕನ್ನಡ ಕರಾವಳಿ ಸುದ್ದಿ: ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಫೈಂಗಲ್ ಚಂಡಮಾರುತದ ಪರಿಣಾಮ ಸೋಮವಾರ ಮಧ್ಯಾಹ್ನದಿಂದ ಮಂಗಳವಾರ ಮಧ್ಯಾಹ್ನದವರೆಗೆ ಧಾರಾಕಾರ ಮಳೆ, ಗಾಳಿ ಸಹಿತ ಸುರಿದಿದ್ದು, ಇದರ ಪರಿಣಾಮ, ಹಲವೆಡೆ ಹಾನಿ, ಕೃತಕ ನೆರೆ ಉಂಟಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಎಲ್ಲ ಕಡೆಗಳಲ್ಲಿ ಹಾಗೂ ಉಡುಪಿ ಜಿಲ್ಲೆಯ ಬೈಂದೂರು, ಕುಂದಾಪುರ, ಹೆಬ್ರಿ, ಕಾರ್ಕಳ, ಕೋಟ, ಬ್ರಹ್ಮಾವರ, ಹಿರಿಯಡ್ಕ, ಕಡಪಾಡಿ, ಮಲ್ಪೆ ಹಾಗೂ ಉಡುಪಿಯ ಭಾಗಗಳಲ್ಲಿ ಗುಡುಗು ಸಹಿತ ಮಳೆ ಸುರಿಯಿತು. ಶಾಲೆ, ಪಿಯು ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಲಾಗಿತ್ತು.
ಉಳ್ಳಾಲದಲ್ಲಿ ಸಮುದ್ರ ಪ್ರಕ್ಷುಬ್ದವಾಗಿದ್ದರೆ, ಅರಬ್ಬಿ ಸಮುದ್ರದಲ್ಲಿ ಗಾಳಿ ಒತ್ತಡ ಮತ್ತು ಅಲೆಗಳ ಅಬ್ಬರ ಹೆಚ್ಚಾಗಿದ್ದ ಕಾರಣ, ಮೀನುಗಾರಿಕೆ ನಡೆಸುವ ದೋಣಿಗಳೆಲ್ಲವೂ ದಡ ಸೇರಿವೆ. ಈಗಾಗಲೇ ಕಡಲಿಗಿಳಿದಿದ್ದ ಬೋಟುಗಳು ಹಲವೆಡೆ ಸಮೀಪದ ದಡ ಸೇರಿದ್ದರೆ, ಮಲ್ಪೆ ಬಂದರಿನಲ್ಲಿ ಪರ್ಸೀನ್, ನಾಡದೋಣಿಗಳು ಮೀನುಗಾರಿಕೆ ನಡೆಸದೆ ದಡದಲ್ಲೇ ಉಳಿದಿದ್ದವು. ಮೀನುಗಾರಿಕೆಯಲ್ಲಿ ಬಲೆ ಬೀಸುವ ದೋಣಿಗಳು ಮಂಗಳೂರು ಬಂದರಿನಲ್ಲಿ ಲಂಗರು ಹಾಕಲಾಗಿದ್ದರೂ ಸುಮಾರು ಹತ್ತು ದೋಣಿಗಳು ಮಳೆ, ಕಡಲ ಅಬ್ಬರಕ್ಕೆ ಹಾನಿಯಾಗಿವೆ.
ಫೆಂಗಲ್ ಅಬ್ಬರಕ್ಕೆ ನಾಟಿ ಮಾಡಿದ್ದ ಭತ್ತ ಜಲಾವೃತವಾಗಿದ್ರೆ, ಅಡಿಕೆ, ಬಾಳೆ ತೋಟ ಮುಳುಗಡೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತ ಅಬ್ಬರ ಜೋರಾಗಿದ್ದು, ಪರಿಣಾಮ ನಂದಿನಿ ನದಿ ಉಕ್ಕಿ ಹರಿದಿದ್ದು, ಕಿನ್ನಿಗೋಳಿ ಸುತ್ತಮುತ್ತಲ ಹೊಲ ಗದ್ದೆಗಳು ಮುಳುಗಡೆಯಾಗಿದೆ.ಮತ್ತೊಂದೆಡೆ ಗುಡ್ಡದಿಂದ ಹರಿದು ಬಂದ ಅಪಾರ ಪ್ರಮಾಣದ ನೀರು ಮನೆಗಳಿಗೆ ಜಲದಿಗ್ಬಂಧನ ಹಾಕಿದೆ.
ಇತ್ತ ಮಂಗಳೂರು ನಗರದ ಕರಂಗಲಪಾಡಿಯ ಸಿ.ಜಿ ಕಾಮತ್ ರಸ್ತೆಯಲ್ಲಿ ಜಲಸ್ಫೋಟ ಮಾದರಿಯ ಅವಘಡ ಸಂಭವಿಸಿದೆ.ಭಾರೀ ಮಳೆಗೆ ಮೂರು ಮನೆಯ ಆವರಣ ಗೋಡೆ ಕುಸಿತವಾಗಿದೆ. ಅದೃಷ್ಟವಶಾತ್ ಎಲ್ಲರೂ ಮನೆಯೊಳಗಿದ್ದರಿಂದ ದುರಂತ ತಪ್ಪಿದೆ.
ಚಂಡಮಾರುತದ ಅಬ್ಬರಕ್ಕೆ ಬಂದರಿನಲ್ಲಿ ಲಂಗರು ಹಾಕಿದ್ದ 10ಕ್ಕೂ ಹೆಚ್ಚು ಮೀನುಗಾರಿಕಾ ದೋಣಿಗಳು ಕೊಚ್ಚಿ ಹೋಗಿವೆ. ಕೊಚ್ಚಿ ಹೋದ ದೋಣಿಗಳನ್ನ ಮೀನುಗಾರರು ಎಳೆದು ತಂದಿದ್ದಾರೆ.
ಉಡುಪಿ ಜಿಲ್ಲೆಗೂ ಫೆಂಗಲ್ ಸೈಕ್ಲೋನ್ ಎಫೆಕ್ಟ್ ತಟ್ಟಿದೆ. ಜಿಲ್ಲೆಯಾದ್ಯಂತ ರಾತ್ರಿ ಧಾರಾಕಾರ ಮಳೆಯಾಗ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನೂ, ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ. ಕಡಲು ಅಬ್ಬರಿಸ್ತಿದ್ದು, ಮಲ್ಪೆ ಬೀಚ್, ಸೈಂಟ್ ಮೇರಿಸ್ ದ್ವೀಪಕ್ಕೆ ನಿರ್ಬಂಧ ಮಾಡಲಾಗಿದೆ.
ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾದ ಫೆಂಗಲ್ ಚಂಡಮಾರುತ ತಮಿಳುನಾಡು, ಕೇರಳ ದಾಟಿ ಈಗ ರಾಜ್ಯದಲ್ಲಿ ಅವಾಂತರಗಳನ್ನು ಸೃಷ್ಟಿಸ್ತಿದೆ. ವಾತಾವರಣದಲ್ಲಿ ಕೆಳ ಮತ್ತು ಮಧ್ಯಮದಲ್ಲಿ ಮಾರುತಗಳು ಒಗ್ಗೂಡಿರುವುರಿಂದ ನಿಧಾನಗತಿಯಲ್ಲಿ ಸಾಗುವ ಚಂಡಮಾರುತಗಳು ಅತ್ಯಂತ ಅಪಾಯಕಾರಿ ಮತ್ತು ಇಷ್ಟೊಂದು ಮಳೆಗೆ ಕಾರಣ ಎಂದು ಹವಮಾನ ತಜ್ಞರು ತಿಳಿಸಿದ್ದಾರೆ.