ಕನ್ನಡ ಚಿತ್ರರಂಗದ ಹಾಸ್ಯನಟ ದೊಡ್ಡಣ್ಣ ಅವರಿಗೆ ಕೋಟ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

Views: 0
ಕೋಟ: ಕನ್ನಡ ಚಿತ್ರರಂಗದಕ್ಕೆ ಕುಂದಗನ್ನಡಿಗರು ಅನನ್ಯವಾದ ಸೇವೆ ನೀಡಿದ್ದಾರೆ. ಅಲ್ಲದೆ ತಮಿಳು,ಹಿಂದಿ ಸೇರಿದಂತೆ ಭಾರತೀಯ ಚಿತ್ರರಂಗಕ್ಕೆ ವಿಶಿಷ್ಟ ಕೊಡುಗೆ ಈ ನೆಲದಿಂದ ಸಂದಿದೆ ಎಂದು ಕನ್ನಡ ಚಿತ್ರರಂಗದ ಹಾಸ್ಯ ನಟ ದೊಡ್ಡಣ ಹೇಳಿದರು.
ಅವರು ಪಂಚವರ್ಣ ಯುವಕ ಮಂಡಲ ಕೋಟ ಹಾಗೂ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ನ. 10ರಂದು ಕೋಟದ ಗಾಂಧೀ ಮೈದಾನದಲ್ಲಿ ನಡೆದ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಸಂಘಟನೆಗಳು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿದಾಗ ಅದರ ಹುಟ್ಟು ಸಾರ್ಥಕವೆನಿಸಿಕೊಳ್ಳುತ್ತದೆ. ಅದೇ ರೀತಿಯಾಗಿ ಪಂಚವರ್ಣ ಸಂಘಟನೆಯು ತನ್ನ ಸಮಾಜಮುಖಿ ಕಾರ್ಯಗಳ ಮೂಲಕ ಮಾದರಿಯಾಗಿದೆ ಎಂದು ಹೇಳಿದರು.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ, ಮಾಜಿ ಸಂಸದೆ ಜಯಪ್ರಕಾಶ ಹೆಗ್ಡೆ ಮಾತನಾಡಿ ಕಲೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಆದರೆ ಆ ಕಲೆಯನ್ನು ಗುರುತಿಸಿ ಗೌರವಿಸುವ ಕಾರ್ಯ ಸಂಘಸಂಸ್ಥೆಗಳಿಂದ ಆಗಬೇಕಾಗಿದೆ. ಅಂತಹ ಕಾರ್ಯವನ್ನು ಪಂಚವರ್ಣದಂತಹ ಸಂಘಟನೆಗಳು ಮಾಡುತ್ತಿದೆ ಎಂದರು.
ಸಮಾಜ ಸೇವಕ ಗೀತಾನಂದ ಫೌಂಡೇಶನ್ ಮಣೂರು ಪಡುಕರೆ ಪ್ರವರ್ತಕ ಆನಂದ ಸಿ.ಕುಂದರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕನ್ನಡ ಚಿತ್ರನಟ ದೊಡ್ಡಣ್ಣ ರವರಿಗೆ ಪಂಚವರ್ಣ ಪುರಸ್ಕಾರ ನೀಡಿ ಗೌರವಿಸಲಾಯಿತು
ಕ್ಲೀನ್ ತ್ರಾಸಿ ಮರವಂತೆ ತಂಡ ಹಾಗೂ ರಂಗನಟ ಡಾ|ರಾಧಾಕೃಷ್ಣ ಉರಾಳ, ಸಮಾಜಸೇವಕಿ ಆಶಾ ವಿ. ರಾಮನಗರ ಅವರಿಗೆ ವಿಶೇಷ ಅಭಿನಂದನೆ ನೆರವೇರಿತು.
ಪ್ರತಿಭಾ ಪುರಸ್ಕಾರ ಹಾಗೂ ಅಶಕ್ತರಿಗೆ ಅನಾರೋಗ್ಯ ಪೀಡಿತರಿಗೆ, ವಿದ್ಯಾರ್ಥಿವೇತನ ಮತ್ತು ಸ್ಥಳೀಯ ಅಂಗನವಾಡಿಗೆ ಸಮವಸ್ತ್ರ, ಕನ್ನಡ ಮಾಧ್ಯಮ ಸರಕಾರಿ ಶಾಲೆಗಳಿಗೆ ದತ್ತಿನಿಧಿಯನ್ನು ನೀಡಲಾಯಿತು. ಈಜುಪಟು ದಿಗಂತ್ ಕೋಟತಟ್ಟು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷಿಕ ಜಯರಾಮ್ ಶೆಟ್ಟಿ ಮಣೂರು, ಶೈಕ್ಷಣಿಕ ಸಾಧಕಿ ಶ್ರೇಷ್ಠ ಹಾಗೂ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನರೇಂದ್ರ ಕುಮಾರ್ ಕೋಟ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷ್ಣಮೂರ್ತಿ ಉರಾಳ, ಶ್ರೀನಿವಾಸ್ ಜೋಗಿ ಅವರನ್ನು ಗೌರವಿಸಲಾಯಿತು.
ಸಂಘದ ಅಧ್ಯಕ್ಷ ಅಜಿತ್ ಆಚಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ, ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೋಳಿ , ಮನೋವೈದ್ಯ ಡಾ. ಪ್ರಕಾಶ್ ತೋಳಾರ್, ಉದ್ಯಮಿ ಎಂ. ಸಿ. ಚಂದ್ರಶೇಖರ, ರಾಷ್ಟೀಯ ಮಾನವ ಹಕ್ಕುಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೋಟ ದಿನೇಶ್ ಗಾಣಿಗ, ಅಖಿಲಕರ್ನಾಟಕ ಜೋಗಿ ಸಮಾಜದ ಅಧ್ಯಕ್ಷ ದೇವರಾಜ ಜೋಗಿ, ಶಿಕ್ಷಕ ನರೇಂದ್ರಕುಮಾರ್ ಕೋಟ , ಶಿವಿನ್ ಗ್ರೂಪ್ ನರೇಶ್ ಭಟ್, ಪಾಂಡೇಶ್ವರ ರಕ್ತೇಶ್ವರಿದೇಗುಲದ ಮುಖ್ಯಸ್ಥ ರಮೇಶ್ ರಾವ್, ಸಂಘದ ಗೌರವಾಧ್ಯಕ್ಷರಾದ ಸತೀಶ್ ಎಚ್. ಕುಂದರ್ , ಹೋಟೆಲ್ ಉದ್ಯಮಿ ವೆಂಕಟೇಶ ಪ್ರಭು, ಉದ್ಯಮಿ ಕೋಟ ಶ್ರೀಕಾಂತ್ ಶೆಣೈ , ಮಹಿಳಾ ಮಂಡಲದ ಗೌರವಾಧ್ಯಕ್ಷೆ ಕುಸುಮಾ ದೇವಾಡಿಗ , ಪಂಚವರ್ಣಮಹಿಳಾ ಮಂಡಲ ಅಧ್ಯಕ್ಷೆ ಶ್ರೀಮತಿ ಕಲಾವತಿ ಅಶೋಕ್ , ಪಂಚವರ್ಣ ಗೌರವಾಧ್ಯಕ್ಷರಾದ ಶೇವಧಿ ಸುರೇಶ್ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು.
ಸಂಘದ ಕಾರ್ಯಧ್ಯಕ್ಷ ರವೀಂದ್ರಕೋಟ ಸ್ವಾಗತಿಸಿ ಶಿಕ್ಷಕ ಸತೀಶ್ ಶೆಟ್ಟಿ , ಸಂತೋಷ್ ಮಾಸ್ತರ್ ಕಾರ್ಯಕ್ರಮ ನಿರೂಪಿಸಿ , ಸುಜಾತ ಬಾಯರಿ ವಂದಿಸಿದರು.
.






