ಸಾಂಸ್ಕೃತಿಕ

ಕನ್ನಡದ ಖ್ಯಾತ ನಿರೂಪಕಿ, ನಟಿ ಅಪರ್ಣಾ ನಿಧನ

Views: 236

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟಿ, ನಿರೂಪಕಿ ಅಪರ್ಣಾ ಗುರುವಾರ ರಾತ್ರಿ ನಿಧನರಾದರು.ಕಳೆದ ಎರಡು ವರ್ಷಗಳಿಂದ ಅವರು ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.ಅಪರ್ಣಾ ಅವರಿಗೆ 57 ವರ್ಷ ವಯಸ್ಸಾಗಿತ್ತು.3 ದಿನಗಳಿಂದ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ನಿರೂಪಣೆಯಷ್ಟೇ ಅಲ್ಲದೇ ಮಸಣದ ಹೂವು, ಇನ್ಸ್ ಪೆಕ್ಟರ್ ವಿಕ್ರಮ್ ಸೇರಿದಂತೆ ಹಲವು ಚಿತ್ರಗಳಲ್ಲೂ ಅಪರ್ಣಾ ನಟಿಸಿದ್ದರು.

ನಮ್ಮ ಮೆಟ್ರೋ ಸೇರಿದಂತೆ ಅನೇಕ ಪ್ರಕಟಣೆಗಳಿಗೆ ಧ್ವನಿ ನೀಡಿದ್ದ ಅಪರ್ಣಾ, ಮೂಡಲ ಮನೆ, ಮುಕ್ತ ಮುಕ್ತ ಮೊದಲಾದ ಧಾರಾವಾಹಿಗಳಲ್ಲೂ ನಟಿಸಿದ್ದರು. ದೀಪಾವಳಿ ಕಾರ್ಯಕ್ರಮದಲ್ಲಿ ಸತತ 8 ಗಂಟೆಗಳ ಕಾಲ ನಿರೂಪಣೆ ಮಾಡಿದ್ದ ಅಪರ್ಣಾ, 2013 ರಲ್ಲಿ ಬಿಗ್ ಬಾಸ್ ಶೋ ನಲ್ಲಿಯೂ ಭಾಗವಹಿಸಿದ್ದರು.

90ರ ದಶಕದಲ್ಲಿ ಚಂದನ ವಾಹಿನಿಯಲ್ಲಿ ಮೂಡಿಬಂದ ಹಲವು ಕಾರ್ಯಕ್ರಮಗಳ ನಿರೂಪಣೆ ಮಾಡಿದ ನಂತರ ಭಾರತ ಸರ್ಕಾರದ ವಿವಿಧ ಭಾರತಿಯಲ್ಲಿ ರೇಡಿಯೋ ಜಾಕಿಯಾಗಿ ಕೂಡ ಅಪರ್ಣ ಕಾರ್ಯ ನಿರ್ವಹಿಸಿದ್ದರು.

ಅಪರ್ಣಾ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಕನ್ನಡ ಚಿತ್ರ ರಂಗದ ಅನೇಕ ನಟ,ನಟಿಯರು ಅಪರ್ಣಾ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

 

Related Articles

Back to top button
error: Content is protected !!