ಕಟೀಲು ಮೇಳ: ಮುಂದಿನ ತಿರುಗಾಟದಲ್ಲಿ 7 ಮೇಳಗಳೊಂದಿಗೆ ಪ್ರದರ್ಶನ

Views: 96
ಕನ್ನಡ ಕರಾವಳಿ ಸುದ್ದಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಬಯಲಾಟ ಮಂಡಳಿಯ ಮುಂದಿನ ತಿರುಗಾಟದಲ್ಲಿ ಏಳು ಮೇಳಗಳೊಂದಿಗೆ ನಡೆಯಲಿದೆ ಎಂದು ಕಟೀಲು ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಮಾಹಿತಿ ನೀಡಿದರು.
ಕಟೀಲು ದೇಗುಲದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ವರ್ಷಂಪ್ರತಿ ನೋಂದಾವಣೆಯಾಗುತ್ತಿರುವ ಆಟಗಳ ಸಂಖ್ಯೆ ಹೆಚ್ಚುತ್ತಿದ್ದು ಏಳನೆಯ ಮೇಳ ಆರಂಭಿಸಲಾಗುತ್ತಿದೆ. ವಾರ್ಷಿಕ ಸುಮಾರು 1050 ಪ್ರದರ್ಶನಗಳಲ್ಲಿ 450 ಆಟ ಖಾಯಂ ಆಗಿದ್ದರೆ240 ಆಟ ತತ್ಕಾಲ್ ಅಡಿ ಕೊಡಲಾಗುತ್ತಿದೆ. ಮುಂಗಡ ಬುಕ್ಕಿಂಗ್ ಏಳು ಸಾವಿರಕ್ಕೂ ಹೆಚ್ಚು ಆಟಗಳಿದ್ದು ಕಳೆದ ವರ್ಷ 844 ನವೆಂಬರ್ನಲ್ಲಿ ದೀಪೋತ್ಸವದ ಬಳಿಕ ಮೇಳದ ತಿರುಗಾಟ ನಡೆಯಲಿದೆ. ನೂತನ ಮೇಳಕ್ಕೆ ಅಗತ್ಯವಿರುವ ಚಿನ್ನದ ಕಿರೀಟ ಸೇರಿದಂತೆ ಕೆಲವು ವಸ್ತುಗಳು ಈಗಾಗಲೇ ದೇವಳದಲ್ಲಿದ್ದು, ಈ ವರುಷ ಎರಡು ಬೆಳ್ಳಿಯ ಕಿರೀಟಗಳು ಮೇಳಕ್ಕೆ ಬಂದಿವೆ. ಅಲ್ಲದೆ ಅನೇಕ ವಸ್ತುಗಳನ್ನು ನೀಡಲು ಭಕ್ತರು ಮುಂದೆ ಬಂದಿದ್ದಾರೆ. ಈ ಹಿಂದೆಯೂ ಮೇಳ ಹೊಸದಾಗಿ ಮಾಡುವ ಸಂದರ್ಭ ದೇವಸ್ಥಾನಕ್ಕೆ ಯಾವುದೇ ಖರ್ಚು ಬಂದಿಲ್ಲ. ಭಕ್ತರೇ ಒದಗಿಸಿಕೊಟ್ಟಿದ್ದಾರೆ ಎಂದರು.
ದೇಗಲದ ಆಡಳಿತ ಸಮಿತಿ ಅಧ್ಯಕ್ಷ ಸನತ್ ಕುಮಾರ ಶೆಟ್ಟಿ ಕೊಡೆತ್ತೂರುಗುತ್ತು, ಆನುವಂಶಿಕ ಮೊತ್ತೇಸರ ವಾಸುದೇವ ಆಸ್ರಣ್ಣ, ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಮೇಳಗಳ ಸಂಚಾಲಕ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ, ಬಿಪಿನ್ ಚಂದ್ರ ಶೆಟ್ಟಿ, ಪ್ರವೀಣ್ ಚಂದ್ರ ಶೆಟ್ಟಿ, ಐಕಳ ಗಣೇಶ ಶೆಟ್ಟಿ ಮತ್ತಿತರರಿದ್ದರು.