ಕರಾವಳಿ

ಉದ್ಯೋಗ ಭರವಸೆಯೊಡ್ಡಿ ಲಕ್ಷಾಂತರ ರೂ.ವಂಚನೆ: ಸಚಿತಾ ರೈ ವಿರುದ್ಧ ಮತ್ತೆರಡು ಕೇಸು ದಾಖಲು

Views: 119

ಕನ್ನಡ ಕರಾವಳಿ ಸುದ್ದಿ: ಕೇಂದ್ರ ಮತ್ತು ರಾಜ್ಯ ಸರಕಾರಿ ಸಂಸ್ಥೆಗಳಲ್ಲಿ ಉದ್ಯೋಗ ದೊರಕಿಸುವುದಾಗಿ ನಂಬಿಸಿ ಹಲವರಿಂದ ಲಕ್ಷಾಂತರ ರೂ. ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಡಿವೈಎಫ್‌ಐ ನೇತಾರೆ, ಶಿಕ್ಷಕಿ, ಶೇಣಿ ಬಲ್ತಕಲ್ಲು ನಿವಾಸಿ ಸಚಿತಾ ರೈ (27)ಯನ್ನು ಪೊಲೀಸರು ಈ ಹಿಂದೆ ಬಂಧಿಸಿದ್ದಾರೆ. ಆಕೆಯ ವಿರುದ್ಧ ಪೊಲೀಸರು ಮತ್ತೆರಡು ಕೇಸು ದಾಖಲಿಸಿದ್ದಾರೆ.

ಪೆರ್ಲ ಬೆದ್ರಂಪಳ್ಳದ ಸಂದೀಪ್‌ (28) ಮತ್ತು ಎಣ್ಮಕಜೆಯ ನಯನಾ ಕುಮಾರಿ (34) ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ. ಕರ್ನಾಟಕದ ಲೋಕೋಪಯೋಗಿ ಇಲಾಖೆಯ ನೀರಾವರಿ ವಿಭಾಗ ಅಥವಾ ಪೆಟ್ರೋಲಿಯಂ ಕಂಪೆನಿಯಲ್ಲಿ ಕೆಲಸ ಮಾಡಿಸಿಕೊಡುವುದಾಗಿ ಹೇಳಿ ಬೆದ್ರಂಪಳ್ಳದ ಸಂದೀಪ್‌ ಅವರಿಂದ 12,83,500 ರೂ. ಪಡೆದು ವಂಚಿಸಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಕರ್ನಾಟಕದ ಫುಡ್‌ ಕಾರ್ಪೊರೇಶನ್‌ ಆಫ್‌ ಇಂಡಿಯಾದ ಸಂಸ್ಥೆಯಲ್ಲಿ ಉದ್ಯೋಗ ದೊರಕಿಸಿಕೊಡುವುದಾಗಿ ನಂಬಿಸಿ ಎಣ್ಮಕಜೆಯ ನಯನಾ ಕುಮಾರಿಯಿಂದ 13,90,000 ರೂ. ಪಡೆದು ವಂಚಿಸಿದ್ದಾಗಿ ನೀಡಿದ ದೂರಿನಂತೆ ಸಚಿತಾ ರೈ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.

2022ರ ಮೇ 4ರಿಂದ ಹಲವು ಬಾರಿಯಾಗಿ ಈ ಮೊತ್ತವನ್ನು ನೀಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಅದರಂತೆ ಈವರೆಗೆ ಒಟ್ಟು 15 ಕೇಸುಗಳು ಸಚಿತಾ ರೈ ವಿರುದ್ಧ ದಾಖಲಾಗಿದೆ.

 

Related Articles

Back to top button
error: Content is protected !!