ಇತರೆ

4 ವರ್ಷದ ಬಾಲಕಿ ದನದ ಶೆಡ್‌ನಲ್ಲಿ ಅತ್ಯಾಚಾರ ಮಾಡಿ ಕಲ್ಲಿನಿಂದ ಹೊಡೆದು ಕೊಂದ 65ರ ವೃದ್ಧ!

Views: 63

ಕನ್ನಡ ಕರಾವಳಿ ಸುದ್ದಿ: ವೃದ್ಧನೊಬ್ಬ ನಾಲ್ಕು ವರ್ಷದ ಹೆಣ್ಣು ಮಗುವಿಗೆ ಆಹಾರದ ಭರವಸೆ ನೀಡಿ ಕರೆದೊಯ್ದು ಅತ್ಯಾಚಾರ ಎಸಗಿ ಭೀಕರವಾಗಿ ಕೊಂದು ಹಾಕಿರುವ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ

ಬಾಲಕಿಯ ಕುಟುಂಬ ಸದಸ್ಯರು ಮತ್ತು ಇತರ ಅಪಾರ ಸಂಖ್ಯೆಯ ಪ್ರತಿಭಟನಾಕಾರರು ನಿನ್ನೆ ಸಂಜೆ ಪುಣೆಯ ನವಲೆ ಸೇತುವೆ ಪ್ರದೇಶದಲ್ಲಿ ಶವವನ್ನು ರಸ್ತೆಯ ಮೇಲಿಟ್ಟು, ಮುಂಬೈ-ಬೆಂಗಳೂರು ಹೆದ್ದಾರಿ ತಡೆದು ಭಾರಿ ಆಕ್ರೋಶ ಹೊರ ಹಾಕಿದರು. ಪ್ರಕರಣದಲ್ಲಿ ಪೊಲೀಸರು ಬಂಧಿಸಿರುವ 65 ವರ್ಷದ ವ್ಯಕ್ತಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಅವರು ಒತ್ತಾಯಿಸಿದರು.

ಪ್ರತಿಭಟನೆಯಿಂದಾಗಿ ಜನನಿಬಿಡ ರಸ್ತೆಯಲ್ಲಿ ಸುಮಾರು ನಾಲ್ಕು ಗಂಟೆ ಸಂಚಾರ ಅಸ್ತವ್ಯಸ್ತವಾಯಿತು. ಭಾರಿ ಸಂಚಾರ ದಟ್ಟಣೆ ಉಂಟಾದ ಹಲವು ವಿಡಿಯೊಗಳು ಆನ್‌ಲೈನ್‌ನಲ್ಲಿ ಹರಿದಾಡಿವೆ.

ಇದಾದ ನಂತರ ಬಿಗಿ ಪೊಲೀಸ್ ಭದ್ರತೆಯ ನಡುವೆ ಮಧ್ಯರಾತ್ರಿಯ ನಂತರ ಇಲ್ಲಿನ ವೈಕುಂಠ ಸ್ಮಶಾನದಲ್ಲಿ ಬಾಲಕಿಯ ಮೃತದೇಹದ ಅಂತ್ಯಕ್ರಿಯೆ ನಡೆಸಲಾಯಿತು.

ಕೂಲಿ ಕೆಲಸ ಮಾಡುವ ಮತ್ತು ಕ್ರಿಮಿನಲ್ ದಾಖಲೆ ಹೊಂದಿರುವ ವೃದ್ಧ ದುಷ್ಕರ್ಮಿ, ಪುಣೆಯ ಭೋರ್ ತಹಸಿಲ್‌ನಲ್ಲಿ ಪುಟ್ಟ ಮಗುವಿಗೆ ಆಹಾರದ ಭರವಸೆ ನೀಡಿದ್ದಾನೆ. ನಂತರ ದನಗಳ ಶೆಡ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿ, ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಂದಿದ್ದಾನೆ. ನಂತರ ಶವವನ್ನು ಸಗಣಿಯಲ್ಲಿ ಎಸೆದು ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ದುಷ್ಕರ್ಮಿಯನ್ನು ಪೊಲೀಸರು ಬಂಧಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತಾ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮೇ 7ರ ವರೆಗೆ ಪೊಲೀಸ್ ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಯುತ್ತಿದೆ.

 

 

Related Articles

Back to top button
error: Content is protected !!