ಕಾಡಿ- ಬೇಡಿ ಮದುವೆಯಾಗಿದ್ದ ಗಂಡನ ಅನುಮಾನಕ್ಕೆ ನವವಿವಾಹಿತೆ ನೇಣಿಗೆ ಶರಣು
Views: 28
ಕನ್ನಡ ಕರಾವಳಿ ಸುದ್ದಿ: ಮೊದಲ ವರ್ಷದ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕಿದ್ದ ನವವಿವಾಹಿತೆಯೊಬ್ಬಳು ಗಂಡನ ಮನೆಯಲ್ಲೇ ನೇಣಿಗೆ ಶರಣಾಗಿರುವ ದಾರುಣ ಘಟನೆ ಚಿಕ್ಕಾಬಳ್ಳಾಪುರದಲ್ಲಿ ನಡೆದಿದೆ. ಮೇ 15ಕ್ಕೆ ಮದುವೆಯ ಸಂಭ್ರಮ ಆಚರಿಸಬೇಕಿದ್ದ ನವವಿವಾಹಿತೆ ಇದೀಗ ಸ್ಮಶಾನ ಸೇರಿದ್ದಾಳೆ.
ಗೌರಿಬಿದನೂರು ಮೂಲದ ಶಕುಂತಲಾ ಎಂಬುವರ ಪುತ್ರಿ ಪ್ರೇಮಾ ಹಾಗೂ ಶಿಡ್ಲಘಟ್ಟದ ಜಂಗಮಕೋಟೆಯ ಶಿವಕುಮಾರ್ ಪರಸ್ಪರ ಸಂಬಂದಿಕರಾಗಿದ್ದು, ಪ್ರೇಮಾಳನ್ನು ಶಿವಕುಮಾರ್ ಕಾಡಿ ಬೇಡಿ ಮದುವೆಯಾಗಿದ್ದ ಎಂದು ತಿಳಿದು ಬಂದಿದೆ. ಮದುವೆಯಾದ ಮೊದಲ ಮೂರು ತಿಂಗಳು ದಂಪತಿ ಸುಖವಾಗಿದ್ದರೂ, ದಿನ ಕಳೆದಂತೆ ಜಗಳ ಶುರುವಾಗಿತ್ತು.
ಪ್ರೇಮಾ ಎದೆಯ ಮೇಲೆ ಯುವಕನೊಬ್ಬನ ಹೆಸರಿನ ಹಚ್ಚೆ ಇರುವುದನ್ನು ಕಂಡು ದಾಂಪತ್ಯದಲ್ಲಿ ಬಿರುಕು ಮೂಡಿತ್ತು ಎಂದು ಸಂಬಂಧಿಕರು ತಿಳಿಸಿದ್ದಾರೆ. ಅದು ಕೇವಲ ಸ್ನೇಹಿತನ ಹೆಸರು ಅಂತ ಹೇಳಿದ್ರೂ ಸಹ ನಂಬದ ಶಿವಕುಮಾರ್ ಅನುಮಾನಿಸಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲು ಆರಂಭಿಸಿದ್ದ ಎಂದು ಮೃತಳ ಸಂಬಂಧಿಕರು ದೂರಿದ್ದಾರೆ. ಕೇವಲ ಹಚ್ಚೆ ವಿವಾದ ಮಾತ್ರವಲ್ಲದೆ, ವರದಕ್ಷಿಣೆ ತರುವಂತೆ ಶಿವಕುಮಾರ್ ಪ್ರೇಮಾ ಮೇಲೆ ನಿರಂತರವಾಗಿ ಹಲ್ಲೆ ಮಾಡುತ್ತಿದ್ದ ಎಂದು ಮೃತ ಪ್ರೇಮಾ ತಾಯಿ ಆರೋಪಿಸಿದ್ದಾರೆ.
ಮೂರು ತಿಂಗಳ ಹಿಂದೆ ಪ್ರೇಮಾಗೆ ಗರ್ಭಪಾತವಾಗಿದ್ದು, ಆ ಸಮಯದಲ್ಲಿಯೂ ಗಂಡನ ಮನೆಯವರು ಸರಿಯಾಗಿ ನೋಡಿಕೊಂಡಿರಲಿಲ್ಲ ಎಂದು ಕುಟುಂಬಸ್ಥರು ದೂರಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ವರದಕ್ಷಿಣೆ ಕಿರುಕಳದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೃತಳ ಪತಿ ಶಿವಕುಮಾರ್‌ನನ್ನು ಬಂಧಿಸಿ, ತನಿಖೆ ಆರಂಭಿಸಿದ್ದಾರೆ.






