ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ಮುಂಗಾರು ಮಳೆ ಹುಡುಗಿ ಪೂಜಾ ಗಾಂಧಿ ದಂಪತಿ

Views: 0
ಸ್ಯಾಂಡಲ್ವುಡ್ ನಟಿ ಪೂಜಾ ಗಾಂಧಿ ದಂಪತಿ ಉಡುಪಿಗೆ ಆಗಮಿಸಿದ್ದಾರೆ. ಪತಿ ವಿಜಯ್ ಘೋರ್ಪಡೆ ಜೊತೆ ನಟಿ ಪೂಜಾ ಗಾಂಧಿ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಮದುವೆ ಆದ ನಂತರ ಮೊದಲ ಬಾರಿಗೆ ಉಡುಪಿಗೆ ಆಗಮಿಸಿದ ಪೂಜಾ ಗಾಂಧಿ ದಂಪತಿ, ಕನಕ ನವಗ್ರಹ ಕಿಂಡಿಯ ಮೂಲಕ ದೇವರ ದರ್ಶನ ಮಾಡಿದ್ದಾರೆ. ರಥಬೀದಿಯಲ್ಲಿರುವ ಕಾಣಿಯೂರು ಮಠಕ್ಕೆ ತೆರಳಿ ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿಯವರನ್ನು ಭೇಟಿಯಾಗಿದ್ದು, ಸ್ವಾಮೀಜಿಯವರಿಂದ ಅನುಗ್ರಹ ಮಂತ್ರಾಕ್ಷತೆ ಸ್ವೀಕಾರ ಮಾಡಿದ್ದಾರೆ. ಶ್ರೀಕೃಷ್ಣಮಠ ಮತ್ತು ಕಾಣಿಯೂರು ಮಠ ನವ ದಂಪತಿಯನ್ನು ಗೌರವಿಸಿದ್ದಾರೆ.
ನವೆಂಬರ್ 29ರಂದು ಉದ್ಯಮಿ ವಿಜಯ್ ಘೋರ್ಪಡೆ ಜೊತೆ ಪೂಜಾ ಗಾಂಧಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂತ್ರ- ಮಾಂಗಲ್ಯ ಪದ್ಧತಿಯಲ್ಲಿ ಸರಳವಾಗಿ ಪೂಜಾ ಮದುವೆಯಾಗಿದ್ದಾರೆ.
‘ಮುಂಗಾರು ಮಳೆ’ಚಿತ್ರದ ಮೂಲಕ ಗೋಲ್ಡನ್ ಸ್ಟಾರ್ ಗಣೇಶ್ಗೆ ನಾಯಕಿಯಾಗಿ ಪೂಜಾ ಗಾಂಧಿ ನಟಿಸಿದ್ದರು. ಬಳಿಕ ಮಿಲನ, ದಂಡು ಪಾಳ್ಯ, ಅಭಿನೇತ್ರಿ, ಬುದ್ಧಿವಂತ, ಕೃಷ್ಣ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ರಾಜಕೀಯ ರಂಗ- ಸಿನಿಮಾ ಕ್ಷೇತ್ರ ಎರಡರಲ್ಲೂ ನಟಿ ಗುರುತಿಸಿಕೊಂಡಿದ್ದಾರೆ.






