ಉಡುಪಿ: ವೈರ್‌ಲೆಸ್ ವಿಭಾಗದ ಪೊಲೀಸ್ ಅಧಿಕಾರಿ ಮಲಗಿದ್ದಲ್ಲೇ ಸಾವು

Views: 108
ಉಡುಪಿ: ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಸೇವೆಯಲ್ಲಿದ್ದ ಪೊಲೀಸ್ ಉಪ ನಿರೀಕ್ಷಕರು ತಮ್ಮ ಮನೆಯಲ್ಲಿ ಮಲಗಿದ್ದಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಸೆ. 17ರಂದು ಮಂಗಳವಾರ ಮುಂಜಾನೆ ಶಿರ್ವದಲ್ಲಿ ನಡೆದಿದೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯ ವಯರ್‌ಲೆಸ್ ಕಂಟ್ರೋಲ್ ರೂಂನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಉಪನಿರೀಕ್ಷಕ, ಶಿರ್ವ ನ್ಯಾರ್ಮ ಶ್ರೀ ಧರ್ಮ ಜಾರಂದಾಯ ದೈವಸ್ಥಾನದ ರಸ್ತೆ ಪಕ್ಕದ ನಿವಾಸಿ ನಿತ್ಯಾನಂದ ಶೆಟ್ಟಿ (52) ಮೃತಪಟ್ಟ ಪೊಲೀಸ್ ಅಧಿಕಾರಿ. ಮೃತರು ತಾಯಿ, ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ 28 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಅವರು ಈ ಹಿಂದೆ ಮಲ್ಪೆಯ ಕರಾವಳಿ ಭದ್ರತಾ ಪೊಲೀಸ್‌ನಲ್ಲಿ ಕೆಲಸ ಮಾಡುತ್ತಿದ್ದರು.ಕಳೆದ 4 ವರ್ಷಗಳಿಂದ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯ ವಯರ್‌ಲೆಸ್ ಕಂಟ್ರೋಲ್ ರೂಂನಲ್ಲಿ ಪಿಎಸ್‌ಐ ಆಗಿ ಸೇವೆ ಸಲ್ಲಿಸುತ್ತಿದ್ದರು. ನಿತ್ಯಾನಂದ ಶೆಟ್ಟಿ ರಾತ್ರಿ ಪಾಳಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದು, ರವಿವಾರ ಕರ್ತವ್ಯ ನಿರ್ವಹಿಸಿದ ಬಳಿಕ ಸೋಮವಾರ ವಿಶ್ರಾಂತಿ ಪಡೆದು ರಾತ್ರಿ ಮನೆಯಲ್ಲಿ ಮಲಗಿದ್ದರು ಮಂಗಳವಾರ ಮುಂಜಾನೆ ಪತ್ನಿ ಎಬ್ಬಿಸುವಾಗ ಅವರು ಮಾತನಾಡುತ್ತಿರಲಿಲ್ಲ ಕೂಡಲೇ ಅವರನ್ನು ಶಿರ್ವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದರು. ಅಲ್ಲಿ ಪರೀಕ್ಷಿಸಿದ ವೈದ್ಯರು ನಿತ್ಯಾನಂದ ಅವರು ಮತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ






