ಉಡುಪಿ: ರೈಲಿನಲ್ಲಿ ಪ್ರಯಾಣಿಕ ಸಾವು, ಕುತ್ತಿಗೆಗೆ ಹಗ್ಗದಿಂದ ಬಿಗಿದು ಕೊಲೆಗೈದ ಶಂಕೆ!

Views: 149
ಉಡುಪಿ: ಬೆಂಗಳೂರಿನಿಂದ ಮುರುಡೇಶ್ವರಕ್ಕೆ ಹೋಗುತ್ತಿದ್ದ ರೈಲು ಪ್ರಯಾಣಿಕರೊಬ್ಬರು ಮೂಲ್ಕಿ ಸಮೀಪ ರೈಲಿನಲ್ಲಿ ಅಸ್ಪಸ್ಥರಾಗಿದ್ದು, ಅವರನ್ನು ರೈಲ್ವೆ ಪೊಲೀಸರು ಉಡುಪಿಯಲ್ಲಿ ಆಸ್ಪತ್ರೆಗೆ ಸೇರಿಸಲಾಗಿದೆ. ಅಲ್ಲಿ ಪರೀಕ್ಷಿಸಿದ ವೈದ್ಯರು ವ್ಯಕ್ತಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಮೂಲ್ಕಿ ಪೊಲೀಸರು ಉಡುಪಿಗೆ ತೆರಳಿ ಮೃತ ವ್ಯಕ್ತಿಯ ಅಂಗಿಯ ಕಾಲರ್ ಪಟ್ಟಿಯ ಮೂಲಕ ಟೈಲರ್ ವಿಳಾಸ ಕಂಡುಕೊಂಡು ಮನೆಯವರನ್ನು ಪತ್ತೆ ಮಾಡಿ ಮಾಹಿತಿ ಪಡೆದಾಗ ಮೃತ ವ್ಯಕ್ತಿ ಚಿಕ್ಕಬಳ್ಳಾಪುರ ಜಿಲ್ಲೆಯ ಕುಮಾರಪೇಟೆಯ ನಿವಾಸಿ ಅಮೀರ್ ಖಾನ್ ಅವರ ಪುತ್ರ ಮೌಜಾಮ್( 35) ಎಂದು ಗುರುತಿಸಲಾಗಿದೆ. ಅವರ ಮನೆಯವರು ಉಡುಪಿಗೆ ಬಂದು ಮೃತ ದೇಹವನ್ನು ನೋಡಿದಾಗ ಕುತ್ತಿಗೆಯ ಬಳಿ ಹಗ್ಗದಿಂದ ಬಿಗಿದಿರುವ ಕುರುಹು ಪತ್ತೆಯಾಗಿದೆ. ಹಾಗಾಗಿ ಇದೊಂದು ಕೊಲೆಯಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಯುವಕನ ಮೊಬೈಲ್ನಲ್ಲಿ ಕೊನೆಯ ಸಂಪರ್ಕ ಸಕಲೇಶಪುರದ ಟವರ್ ಲೊಕೇಶನ್ ನಲ್ಲಿ ಪತ್ತೆಯಾಗಿದೆ ಆ ಭಾಗದಲ್ಲಿ ಯಾರೋ ಅವರಲ್ಲಿದ್ದ ಬ್ಯಾಗ್ ಮತ್ತು ಮೊಬೈಲ್ ಅನ್ನು ಸುಲಿಗೆ ಮಾಡುವ ಉದ್ದೇಶದಿಂದ ಕೊಲೆ ನಡೆದಿರಬಹುದು ಎಂದು ಸಂಶಯಿಸಲಾಗಿದೆ.ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






