ಕರಾವಳಿ

ಉಡುಪಿ: ಮೀನುಗಾರಿಕೆ ಬೋಟ್ ಮುಳುಗಡೆ ಐವರು ಮೀನುಗಾರರ ರಕ್ಷಣೆ, ಅಪಾರ ನಷ್ಟ

Views: 45

ಕನ್ನಡ ಕರಾವಳಿ ಸುದ್ದಿ: ಮೀನುಗಾರಿಕಾ ಬೋಟೊಂದು ಸಮುದ್ರ ಮಧ್ಯೆ ಮುಳುಗಡೆಯಾಗಿದ್ದು, ಐದು ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ. ಈ ಅವಘಡದಿಂದ ಮೀನು, ಮೀನಿನ ಬಲೆ, ಇತರ ಸಲಕರಣೆಗಳು ಸಮುದ್ರಪಾಲಾಗಿ ಲಕ್ಷಾಂತರ ರೂ. ನಷ್ಟ ಉಂಟಾಗಿದೆ.

ಸಾಸ್ತಾನ ಕೋಡಿ ಕನ್ಯಾನದ ರವೀಂದ್ರ ಎನ್.ಪೂಜಾರಿ ಎಂಬವರ ವೀರಕಲ್ಕುಡ ಹೆಸರಿನ ಮೀನುಗಾರಿಕಾ ಬೋಟಿನಲ್ಲಿ ತಾಂಡೇಲ್ ಮತ್ತು ನಾಲ್ಕು ಮಂದಿ ಮೀನುಗಾರರು ಮೀನುಗಾರಿಕೆಗಾಗಿ ನ.17ರಂದು ಸಂಜೆ ಮಲ್ಪೆ ಬಂದರಿನಿಂದ ಹೊರಟಿದ್ದರು. ಪಣಂಬೂರು ಎನ್‌ಎಂಪಿಎ ಬಂದರು, ತಣ್ಣೀರುಬಾವಿ ಮಾರ್ಗವಾಗಿ ಮೀನುಗಾರಿಕೆ ನಡೆಸುತ್ತಾ ನ.18ರಂದು ಸಮುದ್ರದಲ್ಲಿಯೇ ಇದ್ದು, ನಂತರ ಮಂಗಳೂರಿನಿಂದ ಪಶ್ಚಿಮಕ್ಕೆ ಸುಮಾರು 17 ನಾಟಿಕಲ್ ಮೈಲ್ ದೂರದಲ್ಲಿ ಮೀನುಗಾರಿಕೆ ನಡೆಸುತ್ತಿತ್ತೆನ್ನಲಾಗಿದೆ

ನ.19ರಂದು ಮೀನುಗಾರಿಕೆ ನಡೆಸುತ್ತಿರುವಾಗ ಸಮುದ್ರದ ಅಲೆಗಳ ಹೊಡೆತಕ್ಕೆ ಬೋಟಿನ ತಳಭಾಗದ ಫೈಬರ್ ಹೊಡೆದು, ನೀರು ಬೋಟಿ ನೊಳಗೆ ನುಗ್ಗಿತೆನ್ನಲಾಗಿದೆ. ಇದರಿಂದ ಬೋಟು ಮುಳುಗಿದ್ದು, ಸಮೀಪದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೀರ ಮಾರುತಿ ಬೋಟಿನವರು ಆಗಮಿಸಿ ಮುಳುಗುತ್ತಿದ್ದ ಬೋಟಿನಲ್ಲಿದ್ದ ಐದು ಮಂದಿ ಮೀನುಗಾರರನ್ನು ರಕ್ಷಣೆ ಮಾಡಿ ದಡ ತಲುಪಿಸಿದ್ದಾರೆ.

ಬೋಟು ಸಂಪೂರ್ಣ ಮುಳುಗಡೆಯಾಗಿದ್ದು, ಬೋಟಿನಲ್ಲಿದ್ದ 10 ಮೀನಿನ ಬಲೆ, ಡಿಸೇಲ್, ಮಂಜುಗಡ್ಡೆ 60,000ರೂ. ಮೌಲ್ಯದ ಮೀನು, ಜಿಪಿಎಸ್ ಮತ್ತು ಇತರೆ ಎಲೆಕ್ಟ್ರಾನಿಕ್ ಉಪಕರಗಳು, ಐದು ಮೊಬೈಲ್‌ಗಳು ಮುಳುಗಿ ಹೋಗಿದೆ ಎಂದು ದೂರಲಾಗಿದೆ. ಇದರಿಂದ ಸುಮಾರು 35 ಲಕ್ಷ ರೂ. ನಷ್ಟ ಉಂಟಾಗಿರುವುದಾಗಿ ಅಂದಾಜಿಸಲಾಗಿದೆ. ಈ ಬಗ್ಗೆ ಮಂಗಳೂರು ಕರಾವಳಿ ಕಾವಲು ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ.

Related Articles

Back to top button
error: Content is protected !!