ಕರಾವಳಿ

ಉಡುಪಿ: ದಲಿತರ ವಿರುದ್ಧ ರೊಚ್ಚಿಗೇಳುವಂತೆ ಪ್ರಚೋದನಕಾರಿ ಭಾಷಣ:ದಲಿತ ಸಂಘರ್ಷ ಸಮಿತಿ ಆಕ್ರೋಶ 

Views: 142

ಕನ್ನಡ ಕರಾವಳಿ ಸುದ್ದಿ: ಮಲ್ಪೆಯಲ್ಲಿ ದಲಿತ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿ ದೌರ್ಜನ್ಯ ಎಸಗಿದ ಹೀನ ಕೃತ್ಯವನ್ನು ಸಮರ್ಥಿಸಿಕೊಳ್ಳುವ ಮೂಲಕ ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್ ಮತ್ತು ಮಾಜಿ ಶಾಸಕ ರಘುಪತಿ ಭಟ್ ತಮ್ಮ ಕೀಳು ಮನಸ್ಥಿತಿಯನ್ನು ಅನಾವರಣಗೊಳಿಸಿದ್ದಾರೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕ‌ರ್ ವಾದ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು ಟೀಕಿಸಿದ್ದಾರೆ.

ಮಲ್ಪೆ ಘಟನೆಗೆ ಸಂಬಂಧಿಸಿ ಉಡುಪಿಯಲ್ಲಿ ರವಿವಾರ ಕರೆಯಲಾದ ದಲಿತ ಸಂಘರ್ಷ ಸಮಿತಿ ಅಂಬೇಡ್ಕ‌ರ್ ವಾದ ಜಿಲ್ಲಾ ಸಮಿತಿಯ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದಲಿತರ ವಿರುದ್ಧ ರೊಚ್ಚಿಗೇಳುವಂತೆ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಮಾತ್ರವಲ್ಲ ಅಸ್ಪೃಶ್ಯ ಸಮುದಾಯಕ್ಕೆ ಬೆದರಿಕೆ ಹಾಕುವ ಕಾರ್ಯವನ್ನೂ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ ಮಾಸ್ತರ್ ಮಾತನಾಡಿ, ಬಂದರಿನಲ್ಲಿ ಕೆಲಸ ಮಾಡುವ ದಲಿತ ಸಮುದಾಯದವರಿಗೆ ತೊಂದರೆಯಾದರೆ ಸುಮ್ಮನೇ ಕೂರುವ ಪ್ರಶ್ನೆಯೇ ಇಲ್ಲ. ಈಗಾಗಲೇ ಲಂಬಾಣಿ ಸಮುದಾಯ ದವರನ್ನು ಬಂದರಿನಿಂದ ಓಡಿಸುವ ಹಾಗೂ ಬೆದರಿಕೆ ಹಾಕುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ಆದುದರಿಂದ ಕೂಡಲೇ ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮಲ್ಪೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಕಿರುಚಾಡಿ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳ ಹೆಸರು ಪ್ರಸ್ತಾಪಿಸಿ ಬೈಯ್ಯುವ ಬದಲು ಪರಸ್ಪರ ಚರ್ಚೆಗೆ ಬಂದರೆ ಸರಿಯಾದ ಉತ್ತರ ಕೊಡಲು ನಾವು ಸಿದ್ಧರಿದ್ದೇವೆ. ದೇಶದ ಯಾವುದೇ ಮೂಲೆಯಲ್ಲಿ ಶೋಷಿತರ ಮೇಲೆ ದೌರ್ಜನ್ಯಗಳಾದಾಗ ಅದರ ವಿರುದ್ಧ ಹೋರಾಡುವುದು ಒಂದು ಪ್ರಗತಿಪರ ಸಂಘಟನೆಯಾದ ನಮ್ಮ ಆದ್ಯ ಕರ್ತವ್ಯ ಎಂದರು.

ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಮಾತನಾಡಿ, ಮಲ್ಪೆ ಬಂದರು ಯಾರೊಬ್ಬರ ಸ್ವಂತ ಆಸ್ತಿ ಅಲ್ಲ. ಅದು ಸರಕಾರದ ಸೊತ್ತು. ಅಲ್ಲಿ ಎಲ್ಲರಿಗೂ ದುಡಿದು ತಿನ್ನುವ ಹಕ್ಕಿದೆ. ಪಾಳೇಗಾರಿಕೆ ಮಾಡಲು ಇದು ಉತ್ತರ ಪ್ರದೇಶ ಅಥವಾ ಬಿಹಾರ ಅಲ್ಲ. ಬುದ್ಧಿವಂತರ ಹಾಗೂ ಸಹಬಾಳ್ವೆಯ ಜಿಲ್ಲೆಯಾದ ಉಡುಪಿಯಲ್ಲಿ ಈ ಪಾಳೇಗಾರಿಕೆಯ ಗೂಂಡಾಗಿರಿ ಸಂಪೂರ್ಣವಾಗಿ ಹತ್ತಿಕ್ಕಬೇಕು ಎಂದು ಒತ್ತಾಯಿಸಿದರು

ಸಭೆಯಲ್ಲಿ ದ.ಸಂ.ಸ. ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮಸುಂದರ್ ತೆಕ್ಕಟ್ಟೆ, ರಾಜೇಂದ್ರ ಮಾಸ್ಟರ್ ಬೆಳ್ಳೆ, ಮಂಜುನಾಥ ನಾಗೂರು, ಸುರೇಶ ಹಕ್ಲಾಡಿ, ಭಾಸ್ಕರ ಮಾಸ್ಟರ್, ಶ್ರೀಧರ ಕುಂಜಿಬೆಟ್ಟು, ಅಣ್ಣಪ್ಪ ನಕ್ರೆ, ತಾಲೂಕು ಸಂಚಾಲಕರಾದ ರಾಜು ಬೆಟ್ಟಿನಮನೆ, ಮಂಜುನಾಥ್ ಬಾಳ್ಳುದ್ರು, ರಾಘವ ಬೆಳ್ಳೆ, ಹರೀಶ್ಚಂದ್ರ ಬಿರ್ತಿ, ಶಿವರಾಮ ಕಾಪು, ಕುಸುಮ ಹಂಗಾರಕಟ್ಟೆ, ಶಿವಾನಂದ ಬಿರ್ತಿ, ರಮೇಶ ಮರವಂತೆ, ಕೃಷ್ಣ ಸುರೇಶ ಬಾರ್ಕೂರು, ಶಿವರಾಜ್ ಬೈಂದೂರು, ರತ್ನಾಕರ ಕುಂಜಿಬೆಟ್ಟು ಉಪಸ್ಥಿತರಿದ್ದರು.

 

Related Articles

Back to top button
error: Content is protected !!