ಉಡುಪಿ ಜಿಲ್ಲೆ ಸಿಸಿಟಿವಿ ಹಾಗೂ ಇತರೆ ಕಣ್ಗಾವಲು ವ್ಯವಸ್ಥೆಗೆ ಅಗತ್ಯ ಕ್ರಮ:ಕೊಲೆ ಸಂತ್ರಸ್ಥರ ಮನೆಗೆ ಭೇಟಿ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ

Views: 0
ಉಡುಪಿ: ಉಡುಪಿ ಜಿಲ್ಲೆಯ ಜನವಸತಿ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಳ ಮಾಡಲಾಗುತ್ತದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಒಂದೇ ಕುಟುಂಬದ ನಾಲ್ವರು ಹತ್ಯೆಗೀಡಾದ ಮನೆಗೆ ಭೇಟಿ ನೀಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಇಲ್ಲಿನ ನೇಜಾರಿನ ತೃಪ್ತಿ ಲೇಔಟ್‌ನಲ್ಲಿ ಹತ್ಯೆಗೀಡಾದ ಮೊಹಮ್ಮದ್ ನೂರ್ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಸಂತ್ರಸ್ಥ ಕುಟುಂಬದೊಂದಿಗೆ ಸರ್ಕಾರ ಇರಲಿದೆ. ಆರೋಪಿಗಳನ್ನು ತಕ್ಷಣವೇ ಬಂಧಿಸುವ ಮೂಲಕ ಉಡುಪಿ ಪೊಲೀಸರು ಶ್ಲಾಘನೀಯ ಕೆಲಸ ಮಾಡಿದ್ದಾರೆ. ನಾನು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದೇನೆ ಮತ್ತು ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಿದ್ದೇನೆ. ಕುಟುಂಬಕ್ಕೆ ಶೀಘ್ರ ನ್ಯಾಯ ದೊರಕಿಸಲು ಸರ್ಕಾರದ ವತಿಯಿಂದ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ ಎಂದು ಹೇಳಿದರು.
ಉಡುಪಿಯ ಜನರು ಶಾಂತಿಯನ್ನು ಪ್ರೀತಿಸುತ್ತಿದ್ದು, ಈ ಘಟನೆ ಅವರ ಮನಸ್ಸಿನಲ್ಲಿ ಭಯ ಮೂಡಿಸಿದೆ. ಇಂತಹ ಘಟನೆಗಳು ನಡೆಯಬಾರದಿತ್ತು. ವಿಶೇಷವಾಗಿ ವಸತಿ ಪ್ರದೇಶಗಳಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಉಡುಪಿ ಜಿಲ್ಲೆಯಲ್ಲಿ ಸಿಸಿಟಿವಿ ಹಾಗೂ ಇತರೆ ಕಣ್ಗಾವಲು ವ್ಯವಸ್ಥೆಗೆ ಅಗತ್ಯ ವ್ಯವಸ್ಥೆ ಕಲ್ಪಿಸಲು ಡಿಸಿ ಮತ್ತು ಎಸ್ಪಿ ಜತೆ ಮಾತನಾಡುತ್ತೇನೆ ಎಂದು ಹೇಳಿದರು.
ಬೆಳಗಾವಿಯ ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ನಡೆದ ಕೊಲೆ ಪ್ರಕರಣದ ಆರೋಪಿ ಪ್ರವೀಣ್ ಅರುಣ್ ಚೌಗುಲೆಯನ್ನು ಬಂಧಿಸಿದ ನಂತರ, ಈತನ ಬಗ್ಗೆ ಯಾರಿಗೂ ಸುಳಿವು ಸಿಕ್ಕಿಲ್ಲ ಎಂದು ಸಚಿವೆ ಹೆಬ್ಬಾಳ್ಕರ್ ಹೇಳಿದರು. “ಆರೋಪಿಯು ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದು, ಸೈಕೋನಂತೆ ಕಾಣುತ್ತಾನೆ. 20 ನಿಮಿಷದಲ್ಲಿ ನಾಲ್ಕು ಕೊಲೆ ಮಾಡಿರುವ ಆರೋಪಿಗಳ ಮಾನಸಿಕ ಸ್ಥಿತಿ ನಮ್ಮ ಊಹೆಗೂ ನಿಲುಕದ್ದು. ಕೊಲೆ ಪ್ರಕರಣದ ತ್ವರಿತ ವಿಚಾರಣೆ ನಡೆಸಬೇಕು. ಕಾನೂನಿನ ಚೌಕಟ್ಟಿನಲ್ಲಿ ಪ್ರಕರಣವನ್ನು ತ್ವರಿತಗೊಳಿಸಲು ಸರ್ಕಾರವು ಕುಟುಂಬಕ್ಕೆ ಎಲ್ಲ ರೀತಿಯ ಬೆಂಬಲವನ್ನು ನೀಡುತ್ತದೆ ಎಂದು ಹೇಳಿದರು.