ಕರಾವಳಿ

ಉಡುಪಿ:ಹಿರಿಯ ಕೈಮಗ್ಗ ಸೀರೆ ನೇಕಾರ ಸಂಜೀವ ಶೆಟ್ಟಿಗಾರ, ಸೋಮಪ್ಪ ಜತ್ತನ್ನ ಅವರಿಗೆ “ನೇಕಾರ ರತ್ನ ಪ್ರಶಸ್ತಿ”

Views: 55

ಉಡುಪಿ: ಉಡುಪಿ ಸೀರೆ ನೇಕಾರರಿಗೆ ಕದಿಕೆ ಟ್ರಸ್ಟ್ ನ ಅತ್ಯುನ್ನತ ನೇಕಾರ ರತ್ನ ಪ್ರಶಸ್ತಿಗೆ ಹಿರಿಯ  ನೇಕಾರರಾದ ಸಂಜೀವ ಶೆಟ್ಟಿಗಾರ್ ಹಾಗೂ ಸೋಮಪ್ಪ ಜತ್ತನ್ನ ಅವರನ್ನು ಆಯ್ಕೆ ಮಾಡಲಾಗಿದೆ.

ಸಂಜೀವ ಶೆಟ್ಟಿಗಾರ್(86 ವರ್ಷ ) ಅಧ್ಯಕ್ಷರು, ಶಿವಳ್ಳಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ ಮತ್ತು ಸೋಮಪ್ಪ ಜತ್ತನ್ನ (89 ವರ್ಷ) ನಿರ್ದೇಶಕರು , ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರ ಸಂಘ ಇವರು ತಮ್ಮ ಜೀವಮಾನದ ಸಾಧನೆಗಾಗಿ ಕದಿಕೆ ಟ್ರಸ್ಟ್ , ಕೈಮಗ್ಗ ನೇಕಾರರಿಗೆ ಕೊಡ ಮಾಡುವ, ಪ್ರತಿಷ್ಟಿತ “ನೇಕಾರ ರತ್ನ ” ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.

ಇವರಿಬ್ಬರು ಅವಿಭಜಿತ ದ. ಕ. ಜಿಲ್ಲೆಯ ಅತ್ಯಂತ ಹಿರಿಯ ಸಕ್ರಿಯ ನೇಕಾರರು. ಸಂಜೀವ ಶೆಟ್ಟಿಗಾರ್ ಅವರು ಸುಮಾರು 74 ವರ್ಷಗಳಿಂದ ನಿರಂತರ ನೇಯ್ಗೆ ಮಾಡುತ್ತಿರುವುದು ಒಂದು ದಾಖಲೆ ಆಗಿದೆ. ಸೋಮಪ್ಪ ಜತ್ತನ್ನ ಅವರು ಕಳೆದ 66 ವರುಷಗಳಿಂದ ನೇಕಾರಿಕೆಯ ಕಾಯಕದಲ್ಲಿ ನಿರತರಾಗಿದ್ದಾರೆ.

ಸಂಜೀವ ಶೆಟ್ಟಿಗಾರ್ ಈಗ ಅಳಿದು ಹೋದ ಮುತ್ತು ಬಾರ್ಡರ್ ನೇಯ್ಗೆ ಯನ್ನು 2019 ರವರೆಗೆ ನೇಯುತ್ತಿದ್ದರು . ಈಗಲೂ ತಮ್ಮದೇ ವಿನ್ಯಾಸದ ಸೆರಗಿನಲ್ಲಿ ಬುಟ್ಟಾ ಇರುವ 60 ಕೌಂಟ್ ಸೀರೆಗಳನ್ನು ನೇಯುವುದರ ಜೊತೆಗೆ ಅನೇಕ ನೇಕಾರರಿಗೆ ಹಾಸು ಮತ್ತು ವಿನ್ಯಾಸ ಮಾಡುವ ಕೆಲಸ ಮಾಡುತ್ತಾ ಸಕ್ರಿಯರಾಗಿದ್ದಾರೆ. ನೇಕಾರರ ಸಂಘದ ಕಾರ್ಯ ಚಟುವಟಿಗಳನ್ನು ಅತ್ಯಂತ ದಕ್ಷತೆಯಿಂದ ನಿರ್ವಹಣೆ ಮಾಡುತ್ತಿದ್ದಾರೆ.

ಸೋಮಪ್ಪ ಜತ್ತನ್ನ ಅವರು 60 ಕೌಂಟ್ ನ ಸಣ್ಣ ಚೌಕುಳಿ ವಿನ್ಯಾಸದ ಅಪೂರ್ವ ಕಟ್ ಬಾರ್ಡರ್ ಉಡುಪಿ ಸೀರೆಗಳನ್ನು ನೇಯುತ್ತಿದ್ದಾರೆ.

ಈ ಹಿರಿಯ ಕಾಯಕ ಯೋಗಿಗಳು ಪರಿಸರ ಸ್ನೇಹಿ ಉಡುಪಿ ಸೀರೆ ನೇಕಾರಿಕೆಗೆ ನೀಡಿದ ಕೊಡುಗೆಗಾಗಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಅಳಿವಿನಂಚಿಗೆ ತಲುಪಿದ್ದ ಉಡುಪಿ ಸೀರೆ ನೇಕಾರಿಕೆ ಈಗ ಕದಿಕೆ ಟ್ರಸ್ಟ್ ನ ಪ್ರಯತ್ನದಿಂದ ಪುನಃಶ್ಚೇತನಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

Related Articles

Back to top button