ಉಡುಪಿಯಲ್ಲಿ ಕಾಲರಾ ಭೀತಿ, ಸಾರ್ವಜನಿಕರರು ಎಚ್ಚರದಿಂದ ಇರಬೇಕು:ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ

Views: 196
ಉಡುಪಿ: ಜಿಲ್ಲೆಯಲ್ಲಿ ಕಾಲರಾ ಪ್ರಕರಣಗಳು ಕಂಡುಬಂದಿದ್ದು, ಪ್ರಕರಣಗಳ ಸಂಖ್ಯೆ 15ಕ್ಕೆ ಏರಿಕೆಯಾಗಿದೆ 11 ಮಂದಿಯಲ್ಲಿ ಕಾಲರಾ ದೃಢವಾಗಿದ್ದು, ಪ್ರಸ್ತುತ ಎಂಟು ಪ್ರಕರಣಗಳು ಸಕ್ರಿಯವಾಗಿದೆ. ಗುರುವಾರ ಕಾಪು ಮತ್ತು ಬೀಜಾಡಿಯ ಓರ್ವರಲ್ಲಿ ಕಾಲರ ಪತ್ತೆಯಾಗಿದ್ದು, ಮಲ್ಪೆಯ ಇಬ್ಬರಲ್ಲಿ ಹಾಗೂ ಶಿರ್ವ,ಕೆಮ್ಮಣ್ಣು ಕಾಲರಾ ಪ್ರಕರಣಗಳು ಪತ್ತೆಯಾಗಿವೆ.ಸಾರ್ವಜನಿಕರು ಈ ಬಗ್ಗೆ ಎಚ್ಚರದಿಂದ ಇರಬೇಕು. ಸ್ವಚ್ಛತೆಗೆ ಆದ್ಯತೆ ನೀಡಿದರೆ ರೋಗದಿಂದ ದೂರವಿರಲು ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದ್ದಾರೆ.
ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಎಲ್ಲಾ ಸಮುದ್ರ ಉತ್ಪನ್ನಗಳನ್ನು ಚೆನ್ನಾಗಿ ತೊಳೆದು ಉಪಯೋಗಿಸಬೇಕು. ಊಟ ತಯಾರಿ ಹಾಗೂ ಊಟ ಮಾಡುವ ಮುನ್ನ ಕೈಗಳನ್ನು ಸಾಬೂನಿನಿಂದ ಸ್ವಚ್ಛಗೊಳಿಸಬೇಕು. ಶೌಚಾಲಯಗಳನ್ನು ಬಳಸಿದ ನಂತರವೂ ಸಹ ಕೈಗಳನ್ನು ಸಾಬೂನಿನಿಂದ ತೊಳೆದು ಸ್ವಚ್ಛತೆಗೆ ಆದ್ಯತೆ ನೀಡಬೇಕು. ರಸ್ತೆ ಬದಿಯಲ್ಲಿ ಮಾರಾಟ ಮಾಡುವ ತಿನಿಸು ಹಾಗೂ ತಳ್ಳುಗಾಡಿಯಲ್ಲಿ ಮಾರಾಟ ಮಾಡುವ ಆಹಾರಗಳನ್ನು ಹಾಗೂ ಹಣ್ಣುಗಳನ್ನು ಸೇವಿಸಬಾರದು. ಶಾಲಾ-ಕಾಲೇಜು ಹಾಗೂ ಅಂಗನವಾಡಿಗಳಲ್ಲಿ ಮಕ್ಕಳು ಕೈಗಳನ್ನು ಸ್ವಚ್ಛವಾಗಿ ತೊಳೆದು ಆಹಾರ ಉತ್ಪನ್ನಗಳನ್ನು ಸೇವಿಸಬೇಕು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದ್ದಾರೆ.
ಡೆಂಗ್ಯೂ, ಚಿಕೂನ್‌ಗುನ್ಯ, ಝೀಕಾ ರೋಗಗಳು ವೈರಸ್ ಸೋಂಕಿತ ಈಡಿಸ್ ಸೊಳ್ಳೆ ಕಚ್ಚುವುದರಿಂದ ಹರಡುತ್ತದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳ ಜನರು ಮಳೆ ನೀರು ಅಥವಾ ಇತರೆ ನೀರು ಎಲ್ಲೆಂದರಲ್ಲಿ ನಿಂತು ಸೊಳ್ಳೆಗಳ ಉತ್ಪನ್ನ ತಾಣಗಳಾಗದಂತೆ ಎಚ್ಚರವಹಿಸಬೇಕು. ಮಳೆಗಾಲ ಮುಗಿಯುತ್ತಾ ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿರುವ ಬಾವಿ, ಇತರೆ ಮೂಲದ ನೀರು ಪರೀಕ್ಷೆಯನ್ನು ಸ್ಥಳೀಯ ಸಂಸ್ಥೆಗಳು ಹಾಗೂ ಆರೋಗ್ಯ ಇಲಾಖೆಯ ವತಿಯಿಂದ ಕೈಗೊಂಡು ಅವುಗಳು ಬಳಕೆಗೆ ಯೋಗ್ಯವಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ಸೆ.14ರಿಂದ ಅಕ್ಟೋಬರ್ 2ರವರೆಗೆ ‘ಸ್ವಚ್ಛತಾ ಹೀ ಸೇವಾ’ ಅಭಿಯಾನವನ್ನು ಆಂದೋಲನದ ರೀತಿಯಲ್ಲಿ ನಡೆಸಲಾಗುತ್ತಿದೆ. ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಸ್ಥಳೀಯ ಸಂಸ್ಥೆಗಳು ಸಾರ್ವಜನಿಕ ಸ್ಥಳಗಳು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಸಾರ್ವಜನಿಕ ಶೌಚಾಲಯಗಳಲ್ಲಿ ನೈರ್ಮಲ್ಯ ಕಾಪಾಡಲು ಹೆಚ್ಚಿನ ಆದ್ಯತೆ ವಹಿಸಬೇಕು ಎಂದು ಸೂಚನೆ ನೀಡಿದರು.
ಕಾಲರಾ ಸೋಂಕುಕಾರಕ ರೋಗ. ಕಲುಷಿತವಾದ ಆಹಾರ ಸೇವಿಸುವುದರಿಂದ ಬ್ರಿಯೊ ಕಾಲರಾ ಎಂಬ ಬ್ಯಾಕ್ಟೀರಿಯಾ ಮೂಲಕ ಇದು ಹರಡುತ್ತದೆ. ಸ್ವಚ್ಛತೆಗೆ ಆದ್ಯತೆ ಕಡಿಮೆ ಇರುವ ಸ್ಥಳಗಳಲ್ಲಿ ಇದರ ಬಾಧೆ ಹೆಚ್ಚು. ಸೋಂಕು ಇರುವ ಆಹಾರ ಅಥವಾ ನೀರಿನ ಸೇವನೆಯಿಂದ ಬ್ಯಾಕ್ಟೀರಿಯಾ ದೇಹ ಪ್ರವೇಶಿಸುತ್ತದೆ. ಮನೆಗೆ ತರುವ ಎಲ್ಲಾ ರೀತಿಯ ತರಕಾರಿ, ಹಣ್ಣು ಹಾಗೂ ಸಮುದ್ರ ಉತ್ಪನ್ನಗಳನ್ನು ಚೆನ್ನಾಗಿ ನೀರಿನಿಂದ ತೊಳೆದು ಸ್ವಚ್ಛಗೊಳಿಸಿ ಬಳಸಬೇಕು. ತೀವ್ರವಾದ ಅತಿಸಾರ ವಾಂತಿ ಹಾಗೂ ನಿರ್ಜಲೀಕರಣದಂತಹ ರೋಗ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು. ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಜನರಿಗೆ ಕುಡಿಯಲು ಬಿಸಿನೀರನ್ನೇ ನೀಡಬೇಕು. ಹೋಟೆಲ್‌ಗಳಲ್ಲಿ ಬಳಸುವ ಲೋಟ, ತಟ್ಟೆ ಹಾಗೂ ಪಾತ್ರೆಗಳನ್ನೂ ಸಹ ಬಿಸಿ ನೀರಿನಲ್ಲಿ ತೊಳೆಯಬೇಕು. ಯಾವುದೇ ಸಮುದ್ರದ ಉತ್ಪನ್ನಗಳನ್ನು ಸರಿಯಾಗಿ ಕೈತೊಳೆದು ಮುಟ್ಟುವುದು ಸೂಕ್ತ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾಹಿತಿ ನೀಡಿದರು.