ಈದ್‌ಮಿಲಾದ್ ಹಬ್ಬದ ಮೆರವಣಿಗೆ, ಸವಾಲು-ಪ್ರತಿ ಸವಾಲು: ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಖಾಕಿ ಕಣ್ಗಾವಲು

Views: 74
ಈದ್‌ಮಿಲಾದ್ ಹಬ್ಬದ ಮೆರವಣಿಗೆಗೆ ಸಂಬಂಧಿಸಿದಂತೆ ಸವಾಲು-ಪ್ರತಿ ಸವಾಲುಗಳ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು, ಈದ್ ಮೆರವಣಿಗೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಾಗದಂತೆ ಕಟ್ಟೆಚ್ಚರ ವಹಿಸಲಾಗಿದೆ.
ಈದ್ ಆಚರಣೆಗೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ ಸಹಕಾರ್ಯದರ್ಶಿ ಚರಣ್ ಪಂಪ್‌ವೆಲ್ ನಾಗಮಂಗಲದ ಗಣೇಶ ವಿಸರ್ಜನೆ ಗಲಭೆಯನ್ನು ಖಂಡಿಸಿ, ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಹಿಂದೂಗಳು ಮನಸ್ಸು ಮಾಡಿದರೆ ಈದ್ ಮೆರವಣಿಗೆ ಅಸಾಧ್ಯ ಎಂಬ ಹೇಳಿಕೆ ನೀಡಿದ್ದರು.
ಇದಕ್ಕೆ ಪ್ರತಿಯಾಗಿ ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ ಮಹಮದ್ ಷರೀಫ್ ತಾಕತ್ತಿದ್ದರೆ ಈದ್ ಮೆರವಣಿಗೆ ತಡೆಯಿರಿ, ಬಿ.ಸಿ. ರೋಡ್‌ಗೆ ಬನ್ನಿ ಎಂದು ಸವಾಲು ಎಸೆದಿದ್ದರು.
ಈ ಸವಾಲನ್ನು ಸ್ವೀಕರಿಸಿರುವ ಹಿಂದೂಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಬಿ.ಸಿ. ರೋಡ್‌ನಲ್ಲಿ ಇಂದು ಬೆಳಿಗ್ಗೆಯಿಂದಲೇ ಜಮಾವಣೆಗೊಂಡಿದ್ದು, ಪರಿಸ್ಥಿತಿ ಬಿಗುವಿನಿಂದ ಕೂಡಿದೆ. ಇನ್ನೊಂದೆಡೆ ಬಿ.ಸಿ. ರೋಡ್‌ಗೆ ಈದ್ ಮೆರವಣಿಗೆಯು ಆರಂಭವಾಗಿದ್ದು, ಪೊಲೀಸರು ಪರಿಸ್ಥಿತಿಯನ್ನು ತಹಬದಿಗೆ ತಂದು ಯಾವುದೇ ರೀತಿಯ ಅಹಿತಕರ ಘಟನೆಗಳಾಗದಂತೆ ಕಟ್ಟೆಚ್ಚರ ವಹಿಸಿದ್ದಾರೆ.
ಈದ್ ಮಿಲಾದ್ ಹಬ್ಬವೂ ಇರುವ ಕಾರಣ ಸುರತ್ಕಲ್ ಪ್ರದೇಶ ಸೇರಿದಂತೆ ಮಂಗಳೂರು ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಕಲ್ಲು ತೂರಾಟ ಮಾಡಿರುವ ಬಗ್ಗೆ ಪ್ರಕರಣ ದಾಖಲಿಸಲಾಗಿದೆ ಎಂದು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.
ನಗರದ ಸೂಕ್ಷ್ಮ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಕೈಗೊಂಡು ಪರಿಸ್ಥಿತಿಯ ಮೇಲೆ ನಿಗಾ ವಹಿಸಲಾಗಿದೆ ಪ್ರಚೋದನಾ ಕಾರಿ ಹೇಳಿಕೆ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು






