ಇತಿಹಾಸ ತಜ್ಞೆ ಡಾ| ಮಾಲತಿ ಕೃಷ್ಣಮೂರ್ತಿಗೆ ಪೊಳಲಿ ಶೀನಪ್ಪ ಹೆಗ್ಡೆ ಮತ್ತು ಎಸ್.ಆರ್.ಹೆಗ್ಡೆ ಜಂಟಿ ಪ್ರಶಸ್ತಿ

Views: 43
ಕನ್ನಡ ಕರಾವಳಿ ಸುದ್ದಿ: ಮಾಹೆ ವಿವಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಪೊಳಲಿ ಶೀನಪ್ಪ ಹೆಗ್ಡೆ ಮತ್ತು ಎಸ್.ಆರ್. ಹೆಗ್ಡೆ ಜಂಟಿ ಹೆಸರಲ್ಲಿ 2025ನೇ ಸಾಲಿನ ಪ್ರಶಸ್ತಿಗೆ ಇತಿಹಾಸ ತಜ್ಞೆ ಡಾ| ಮಾಲತಿ ಕೃಷ್ಣಮೂರ್ತಿ ಆಯ್ಕೆಯಾಗಿದ್ದಾರೆ.
ಡಾ.ಮಾಲತಿ ಕೃಷ್ಣಮೂರ್ತಿ ಕಲ್ಯಾಣಪುರ ಸಮೀಪದ ಮೂಡುಕುದುರು ಎಂಬಲ್ಲಿ ಶ್ರೀನಿವಾಸ ರಾವ್ ಮತ್ತು ವರದಾಲಕ್ಷ್ಮಿ ಅವರ ಮಗಳಾಗಿ 1952ರಲ್ಲಿ ಜನಿಸಿದರು. ಮಿಲಾಗ್ರಿಸ್ ಕಾಲೇಜಿನ ಮೊದಲ ಬ್ಯಾಚ್ ವಿದ್ಯಾರ್ಥಿನಿಯಾಗಿ, ಮೈಸೂರು ವಿವಿಯಿಂದ ಬಿ.ಎ ಪದವಿ ಪರೀಕ್ಷೆಯಲ್ಲಿ ನಾಲ್ಕನೇ ರ‍್ಯಾಂಕ್ , ಅರ್ಥ ಶಾಸ್ತ್ರದಲ್ಲಿ ಚಿನ್ನದ ಪದಕ, ಮೈಸೂರು ವಿವಿ ಇತಿಹಾಸ ಎಂ.ಎ.ಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದಿದ್ದರು. ಇತಿಹಾಸತಜ್ಞ ಡಾ.ಬಿ.ಸುರೇಂದ್ರ ರಾವ್ ಮಾರ್ಗದರ್ಶನದಲ್ಲಿ ಮೈಸೂರು ವಿವಿಯಿಂದ ಪಿಎಚ್‌ಡಿ ಪದವಿ ಪಡೆದಿದಾರೆ.
1972ರಿಂದ ಇತಿಹಾಸ ಉಪನ್ಯಾಸಕರಾಗಿ, ಪ್ರಾಧ್ಯಾಪಕಿಯಾಗಿ ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜು ಹಾಗೂ ಉಡುಪಿಯ ಎಂ.ಜಿ.ಎಂ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಿ ವಿಭಾಗ ಮುಖ್ಯಸ್ಥರಾಗಿ ಸ್ವಯಂ ನಿವೃತ್ತಿ ಪಡೆದಿದ್ದರು.
ಡಾ.ಬಿ.ಎವೇಕ ರೈಗಳ ಸಂಪಾದಕತ್ವದ ‘ಮಂಗಳೂರು ದರ್ಶನ’ದ ಪ್ರಥಮ ಸಂಪುಟದಲ್ಲಿ ‘ಬ್ರಿಟಿಷ್ ಆಡಳಿತ ಅವಧಿಯಲ್ಲಿ ಮಂಗಳೂರಿನ ವ್ಯಾಪಾರ ಮತ್ತು ಆಡಳಿತ’ ಎಂಬ ಸಂಶೋಧನಾ ಪ್ರಬಂಧ ಪ್ರಕಟವಾಗಿದೆ. ಸುಮಾರು 25ಕ್ಕೂ ಹೆಚ್ಚು ಸಂಶೋಧನಾ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಬಂಟರ ಇತಿಹಾಸ ಪ್ರಾಜೆಕ್ಟ್‌ನಲ್ಲಿ ಸಹಾಯಕ ಮಾರ್ಗದರ್ಶಕರಾಗಿ, ಹಲವಾರು ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಮಂಗಳೂರು ವಿವಿ ಇತಿಹಾಸ ಅಧ್ಯಾಪಕರ ಸಂಘ (ಮಾನುಷ)ದ ಸದಸ್ಯೆಯಾಗಿ, ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.
1994ರಲ್ಲಿ ‘ಕುಂದಾಪುರ ತಾಲೂಕು ಒಂದು ಅಧ್ಯಯನ’ ಎಂಬ ಗ್ರಂಥವನ್ನು ಎಚ್.ವಿ.ನರಸಿಂಹ ಮೂರ್ತಿ ಅವರೊಂದಿಗೆ ಸಂಪಾದಿಸಿದ್ದಾರೆ. ಇವರ ‘ಭಾಸ್ಕರಾನಂದ ಸಾಲೆತ್ತೂರು: ತುಳುವ ವಸ್ತು ಪ್ರಪಂಚ’ ಎಂಬ ಕೃತಿ ಬಂಟ್ವಾಳದ ರಾಣಿಅಬ್ಬಕ್ಕ ತುಳು ಅಧ್ಯಯನಕೇಂದ್ರದಿಂದ ಪ್ರಕಟಗೊಂಡಿದೆ.