ಧಾರ್ಮಿಕ

ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ: ಪರ್ಯಾಯ ಪೂಜಾ ಹಸ್ತಾಂತರ ಸಮಾರಂಭ 

Views: 40

ಕನ್ನಡ ಕರಾವಳಿ ಸುದ್ದಿ: ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಮಿಥುನ ಮಾಸದ ಪಾಡ್ಯದಿಂದ ಮುಂದಿನ ಮಿಥುನ ಸಂಕ್ರಮಣದವರೆಗೆ ನಡೆಯಲಿರುವ ವಾರ್ಷಿಕ ಪರ್ಯಾಯ ಪೂಜಾ ಹಸ್ತಾಂತರ ಸಮಾರಂಭವು ದೇವತಾ ಪ್ರಾರ್ಥನೆಯೊಂದಿಗೆ ಇಂದು ಜೂನ್ 16ರಂದು ನೆರವೇರಿತು.

ಉಪಾಧ್ಯಾಯ ಕುಟುಂಬದ ಕುಲಪುರೋಹಿತರಾದ ವೇದಮೂರ್ತಿ ಹೂವಿನಕೆರೆ ವಾದಿರಾಜ ಭಟ್, ಹೂವಿನಕೆರೆ ವಾದೀಶ ಭಟ್, ನೇರಂಬಳ್ಳಿ ಪ್ರಾಣೇಶ ತಂತ್ರಿಗಳು ಹಾಗೂ ಅನೇಕ ಋತ್ವಿಜರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮವು ಭಕ್ತಿಪೂರ್ವಕವಾಗಿ ನಡೆಯಿತು.

ಹಿಂದಿನ ಪರ್ಯಾಯ ಅರ್ಚಕರಾದ ಕೆ. ವ್ಯಾಸ ಉಪಾಧ್ಯಾಯ ಹಾಗೂ ಸಹೋದರರು, ಹಾಲಿ ಪರ್ಯಾಯ ಅರ್ಚಕರಾದ ಕೆ. ಸೂರ್ಯನಾರಾಯಣ ಉಪಾಧ್ಯಾಯ ಹಾಗೂ ಸಹೋದರರಿಗೆ, ದೇವಸ್ಥಾನದ ಆಡಳಿತ ಮಂಡಳಿ, ಅರ್ಚಕ ಮಂಡಳಿ ಹಾಗೂ ಬಂಧುಬಾಂಧವರ ಸಮ್ಮುಖದಲ್ಲಿ ದೇವಳದ ಕೀಲಿಕೈಯನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವೇದಮೂರ್ತಿ ಹೂವಿನಕೆರೆ ವಾದಿರಾಜ ಭಟ್ಟರು, ಅನುವಂಶಿಕವಾಗಿ ನಡೆಯುತ್ತಿರುವ ಶ್ರೀ ದೇವರ ಪರ್ಯಾಯ ಪೂಜೆಯು ಎಲ್ಲರ ಸಹಕಾರದಿಂದ ನಿರ್ವಿಘ್ನವಾಗಿ ಮತ್ತು ಯಶಸ್ವಿಯಾಗಿ ನೆರವೇರಲಿ ಹಾಗೂ ಶ್ರೀ ದೇವರ ಅನುಗ್ರಹವು ಸಮಸ್ತ ಭಕ್ತಾದಿಗಳಿಗೆ ಸದಾ ಲಭಿಸಲಿ ಎಂದು ಆಶೀರ್ವದಿಸಿದರು.

ಕಾರ್ಯಕ್ರಮದಲ್ಲಿ ಆಡಳಿತ ಧರ್ಮದರ್ಶಿಗಳಾದ ಕೆ. ಶ್ರೀ ರಮಣ ಉಪಾಧ್ಯಾಯ, ಧರ್ಮದರ್ಶಿಗಳಾದ ಕೆ. ಪದ್ಮನಾಭ ಉಪಾಧ್ಯಾಯ, ಅರ್ಚಕ ಮಂಡಳಿಯ ಸದಸ್ಯರು, ಆನೆಗುಡ್ಡೆ ಉಪಾಧ್ಯಾಯ ಕುಟುಂಬದ ಬಂಧುಬಾಂಧವರು ಹಾಗೂ ಅನೇಕ ಭಕ್ತಾದಿಗಳು ಉಪಸ್ಥಿತರಿದ್ದರು.

Related Articles

Back to top button
error: Content is protected !!