ಅಭಿಮಾನಿಗಳಿಗೆ ಸಂತಸದ ಸುದ್ಧಿ!!..ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ, ಕಿರುತೆರೆ ಕಲಾವಿದೆ ಅಂಕಿತಾ ಅಮರ್ ʻಜಸ್ಟ್ ಮ್ಯಾರೀಡ್ʼ!

Views: 165
ಬೆಂಗಳೂರು: ಅಜನೀಶ್ ಲೋಕನಾಥ್ ಹಾಗೂ ಸಿ.ಆರ್ ಬಾಬಿ ನಿರ್ಮಿಸುತ್ತಿರುವ, ಸಿ.ಆರ್. ಬಾಬಿ ನಿರ್ದೇಶನದ ʻಜಸ್ಟ್ ಮ್ಯಾರೀಡ್ʼ ಸಿನಿಮಾ ಇದೀಗ ಹೊಸ ಅಪ್‌ಡೇಟ್ ನೀಡಿದೆ. ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಹಾಗೂ ಕಿರುತೆರೆ ಕಲಾವಿದೆ ಅಂಕಿತಾ ಅಮರ್ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಈಗಷ್ಟೇ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕೂ ಚಿತ್ರತಂಡ ಚಾಲನೆ ನೀಡಿದ್ದು, ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ʻಜಸ್ಟ್ ಮ್ಯಾರೀಡ್’ ಸಿನಿಮಾಗೆ ಬೆಂಗಳೂರು, ಮೈಸೂರು ಹಾಗೂ ಚಿಕ್ಕಮಗಳೂರಿನಲ್ಲಿ 45 ದಿನಗಳ ಕಾಲ ಚಿತ್ರೀಕರಣ ನಡೆದಿತ್ತು. ಹಲವು ಸೂಪರ್ ಹಿಟ್ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿ ಜನಪ್ರಿಯತೆ ಪಡೆದ ಅಜನೀಶ್ ಲೋಕನಾಥ್ ಅವರು ಈ ಸಿನಿಮಾದ ಮೂಲಕ ನಿರ್ಮಾಪಕರಾಗಿ ಬಡ್ತಿ ಪಡೆದಿದ್ದಾರೆ. ಸಿ.ಆರ್.ಬಾಬಿ ಅವರು ಈ ಸಿನಿಮಾದ ನಿರ್ಮಾಣದಲ್ಲಿ ಅಜನೀಶ್ಗೆ ಸಾಥ್ ನೀಡಿದ್ದಾರೆ.
ಮಹಿಲಾ ನಿರ್ದೇಶಕಿ ಸಿ.ಆರ್ ಬಾಬಿ ಈ ಸಿನಿಮಾ ಮೂಲಕ ನಿರ್ದೇಶಕಿಯಾಗಿದ್ದಾರೆ. ಚಿತ್ರದಲ್ಲಿ ಆರು ಹಾಡುಗಳಿದ್ದು ಅಜನೀಶ್ ಲೋಕನಾಥ್ ಅವರೇ ಸಂಗೀತ ಸಂಯೋಜನೆ ಮಾಡಿದ್ದಾರೆ. ಪ್ರಮೋದ್ ಮರವಂತೆ ಬರೆದ ಹಾಡು, ವಿಜಯ್ ಪ್ರಕಾಶ್ ಧ್ವನಿಯಲ್ಲಿ ಬಂದ “ಅಭಿಮಾನಿಯಾಗಿ ಹೋದೆ” ಸಾಂಗ್ ಇತ್ತೀಚಿಗೆ ಬಿಡುಗಡೆಯಾಗಿ ಮೆಚ್ಚುಗೆ ಪಡೆದುಕೊಂಡಿದೆ.
ಜಸ್ಟ್ ಮ್ಯಾರೀಡ್’ ಚಿತ್ರದಲ್ಲಿ ಶೈನ್ ಶೆಟ್ಟಿ, ಅಂಕಿತಾ ಅಮರ್, ಅಚ್ಯುತ್ ಕುಮಾರ್, ದೇವರಾಜ್, ಅನೂಪ್ ಭಂಡಾರಿ, ಮಾಳವಿಕಾ ಅವಿನಾಶ್, ಶ್ರುತಿ ಹರಿಹರನ್, ಸಾಕ್ಷಿ ಅಗರವಾಲ್, ಶ್ರುತಿ ಕೃಷ್ಣ, ರವಿಶಂಕರ್ ಗೌಡ, ಶ್ರೀಮಾನ್, ರವಿ ಭಟ್, ಸಂಗೀತಾ ಅನಿಲ್, ವಾಣಿ ಹರಿಕೃಷ್ಣ, ಕುಮುದಾ, ವೇದಿಕಾ ಕಾರ್ಕಳ, ಜಯರಾಮ್ ಮುಂತಾದವರು ನಟಿಸಿದ್ದಾರೆ ಎಂಬುದು ವಿಶೇಷ. ಸಿ.ಆರ್. ಬಾಬಿ ಅವರೇ ಕಥೆ ಬರೆದಿದ್ದಾರೆ. ಅವರ ಜೊತೆ ಸೇರಿ ಧನಂಜಯ್ ರಂಜನ್ ಚಿತ್ರಕಥೆ ಬರೆದಿದ್ದಾರೆ. ಈ ಚಿತ್ರದ ಸಂಭಾಷಣೆ ರಘು ನಿಡುವಳ್ಳಿ ಅವರದ್ದು.
ಪಿ ಜಿ ಛಾಯಾಗ್ರಹಣ, ಶ್ರೀಕಾಂತ್ ಮತ್ತು ಅಶಿಕ್ ಕುಸುಗೊಳ್ಳಿ (ಗಣೇಶ ಸಾಂಗ್) ಸಂಕಲನ, ಅಮರ್ ಕಲಾ ನಿರ್ದೇಶನ, ವಿಕ್ರಮ್ ಮೋರ್ ಸಾಹಸ ನಿರ್ದೇಶನ ಹಾಗೂ ಬಾಬಾ ಭಾಸ್ಕರ್, ಶಾಂತಿ ಅರವಿಂದ್ ಅವರ ನೃತ್ಯ ನಿರ್ದೇಶನ ಜಸ್ಟ್ ಮ್ಯಾರೀಡ್ ಚಿತ್ರಕ್ಕಿದೆ.






