ಅನ್ನಭಾಗ್ಯ ಫಲಾನುಭವಿಗಳಿಗೆ ಇನ್ಮುಂದೆ ಹಣದ ಬದಲು ಅಕ್ಕಿ ವಿತರಣೆ

Views: 134
ಕನ್ನಡ ಕರಾವಳಿ ಸುದ್ದಿ: ವಿಧಾನಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಘೋಷಿಸಿದ್ದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಯಾದ ಅನ್ನಭಾಗ್ಯ ಫಲಾನುಭವಿಗಳಿಗೆ ನೀಡುತ್ತಿದ್ದ ಹಣದ ಬದಲಿಗೆ ಅಕ್ಕಿಯನ್ನೇ ಕೊಡಲು ಸರ್ಕಾರ ತೀರ್ಮಾನ ಮಾಡಿದೆ ಎಂದು ಆಹಾರ ಸಚಿವ ಕೆಹೆಚ್ ಮುನಿಯಪ್ಪ ಹೇಳಿದರು.
ಅನ್ಯಭಾಗ್ಯ ಯೋಜನೆ ಅಡಿ ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ 10 ಕೆಜಿ ಅಕ್ಕಿ ಕೊಡುವುದಾಗಿ ಕಾಂಗ್ರೆಸ್ ಚುನಾವಣಾ ಸಂದರ್ಭದಲ್ಲಿ ಘೋಷಣೆ ಮಾಡಿತ್ತು. ನಂತರದ ದಿನಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಅಕ್ಕಿ ಲಭ್ಯವಾಗದ ಕಾರಣ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ ಕೊಟ್ಟು, ಉಳಿದ 5 ಕೆಜಿ ಅಕ್ಕಿ ಬದಲಿಗೆ 170 ರೂ.ನೀಡಲಾಗುತ್ತಿತ್ತು. ಈಗ ಹಣದ ಬದಲು ಒಟ್ಟು 10 ಕೆಜಿ ಅಕ್ಕಿಯನ್ನೆ ನೀಡುತ್ತೇವೆ ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಈಗ ಕೇಂದ್ರ ಸರ್ಕಾರದಿಂದ ಅಕ್ಕಿ ಲಭ್ಯವಿರುವ ಹಿನ್ನೆಲೆ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿಯನ್ನು ಒಎಂಎಸ್‌ಎಸ್ ಯೋಜನೆ ಅಡಿಯಲ್ಲಿ ಖರೀದಿಸಿ ಈ ತಿಂಗಳಿನಿಂದಲೇ ಹತ್ತು ಕೆ.ಜಿ. ಅಕ್ಕಿ ವಿತರಿಸಲು ತೀರ್ಮಾನಿಸಿದ್ದೇವೆ ಎಂದು ಅವರು ಹೇಳಿದರು.
ಅನ್ನ ಭಾಗ್ಯ ಯೋಜನೆ ಆರಂಭದಲ್ಲಿ ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿ ಜೊತೆ ರಾಜ್ಯ ಸರ್ಕಾರ 5 ಕೆಜಿ ಅಕ್ಕಿ ನೀಡುವುದಾಗಿ ಘೋಷಿಸಿತ್ತು. ಆದರೆ ಕೇಂದ್ರ ಸರ್ಕಾರದಿಂದ ಸರಿಯಾಗಿ ಸ್ಪಂದನೆ ಸಿಗದೇ ಇದ್ದಾಗ ರಾಜ್ಯ ಸರ್ಕಾರ ಅನ್ನಭಾಗ್ಯದ ಹಣ ನೀಡಲಾಗುವುದು ಎಂದು ತಿಳಿಸಿತ್ತು.
ಅದರಂತೆ ಸರ್ಕಾರ ಒಂದು ಕೆಜಿ ಅಕ್ಕಿಗೆ 34 ರೂ. ಪಾವತಿ ಮಾಡಬೇಕಿತ್ತು. ಒಂದು ಪಡಿತರ ಕುಟುಂಬದಲ್ಲಿ ಐವರು ಸದಸ್ಯರಿದ್ದರೆ 25 ಕೆಜಿಗೆ ಅಕ್ಕಿಗೆ ಪ್ರತಿ ತಿಂಗಳು 850 ರೂ. ಜಮೆ ಮಾಡಬೇಕಿತ್ತು. ಆದ್ರೆ ಕಳೆದ 2 ತಿಂಗಳಿನಿಂದಲೂ ಯಾವುದೇ ಹಣ ಜಮೆಯಾದ ಹಿನ್ನೆಲೆ ಈ ಬಗ್ಗೆ ಫಲಾನುಭವಿಗಳು ಅಧಿಕಾರಿಗಳನ್ನು ಪ್ರಶ್ನಿಸಿದ್ದರು. ಅಲ್ಲದೇ ಸರ್ಕಾರದ ವಿರುದ್ಧ ಆಕ್ರೋಶವೂ ಹೊರಹಾಕಿದ್ದರು. ಆದರೀಗ ಹಣದ ಬದಲಿಗೆ ಅಕ್ಕಿಯನ್ನೇ ಕೊಡುವುದಾಗಿ ಆಹಾರ ಸಚಿವರು ಸ್ಪಷ್ಟಪಡಿಸಿದ್ದಾರೆ.