ಸಾಂಸ್ಕೃತಿಕ

ಅತ್ತೆಯವರಿಂದಲೇ ಶಿಸ್ತುಬದ್ಧ ಜೀವನ ಎಂದ ವಿನೋದ್ ರಾಜ್ ಪತ್ನಿ,ಅಜ್ಜಿ ಸಮಾಜಕ್ಕೆ ಸ್ಫೂರ್ತಿ: ಮೊಮ್ಮಗ

Views: 0

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿಯವರು ಬಾರದ ಲೋಕಕ್ಕೆ ಪಯಣ ಬೆಳೆಸಿ ಇಂದು ಭಾನುವಾರಕ್ಕೆ ಮೂರು ದಿನ ಕಳೆದಿದೆ. ಅಂತಿಮ ಕ್ರಿಯೆ ಕಾರ್ಯದಲ್ಲಿ ಅವರ ಪುತ್ರ ವಿನೋದ್ ರಾಜ್ ಪತ್ನಿ ವಿನು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಲೀಲಾವತಿ ಅಮ್ಮನವರು ಎಷ್ಟು ದೊಡ್ಡ ಕಲಾವಿದೆ ಆದರೂ ಜೀವನದಲ್ಲಿ ಬಹಳ ಶಿಸ್ತುಬದ್ಧವಾಗಿದ್ದರು. ಅವರ ಗುಣಗಳನ್ನು ನಾನು ನನ್ನ ಮಗನಿಗೂ ಹೇಳಿಕೊಟ್ಟಿದ್ದೇನೆ. ಅತ್ತೆಯವರಿಂದಲೇ ಅಷ್ಟು ಉತ್ತಮ ಗುಣನಡತೆ, ಶಿಸ್ತುಬದ್ಧ ಜೀವನ, ಸಾಧನೆ ಸಾಧ್ಯವಾಯಿತು.ಅವರನ್ನು ನೋಡಿ ಜೀವನದಲ್ಲಿ ನಾನು ಬಹಳಷ್ಟು ಕಲಿತಿದ್ದೇನೆ. ಅವರಂಥ ಅತ್ತೆ ಪಡೆಯುವುದಕ್ಕೂ ನಾನು ಮತ್ತು ಅವರಂಥ ಅಜ್ಜಿ ಪಡೆಯುವುದಕ್ಕೂ ನನ್ನ ಮಗ ಪುಣ್ಯ ಮಾಡಿದ್ದೇವೆ ಎಂದರು.

ಲೀಲಾವತಿ ಅಮ್ಮನವರು ತೋಟಗಾರಿಕೆ, ಇತರ ಕೆಲಸಗಳಲ್ಲಿ ಬಹಳ ಶಿಸ್ತುಬದ್ಧವಾಗಿ ಇರುತ್ತಿದ್ದರು. ಅವರ ಹಂತಕ್ಕೆ ಬದುಕಲು ನಾವು ಪ್ರಯತ್ನ ಮಾಡುತ್ತಿದ್ದೇವೆ. ಅವರು ನಟಿಸಿದ ಚಿತ್ರಗಳೆಲ್ಲ ನನಗೆ ಇಷ್ಟ. ಅವರ ಸಾಮಾಜಿಕ ಕಾರ್ಯ ಮಾದರಿ. ಜೀವನವೇ ಬೇರೆಯವರಿಗೆ ಮೀಸಲಿಟ್ಟರು ಎಂದರು.

ತಾಯಿ ಕಳೆದುಕೊಂಡ ವಿನೋದ್ ರಾಜ್ ಅವರು ತುಂಬ ದುಃಖದಲ್ಲಿದ್ದಾರೆ. ತಾಯಿ ಪ್ರೀತಿಯನ್ನು ಯಾರೂ ನೀಡಲು ಸಾಧ್ಯವಿಲ್ಲ, ಆದಷ್ಟು ಪ್ರೀತಿ ವಿಶ್ವಾಸ ತೋರಿಸಿ ವಿನೋದ್ ಅವರು ಖುಷಿಯಾಗಿರುವಂತೆ ನೋಡಿಕೊಳ್ಳುತ್ತೇವೆ ಎಂದು ಲೀಲಾವತಿ ಅವರ ಚೆನ್ನೈಯಲ್ಲಿ ವಾಸಿಸುತ್ತಿರುವ ಸೊಸೆ ವಿನು ಹೇಳಿದರು.

ಇನ್ನು ವಿನೋದ್ ರಾಜ್ ಪುತ್ರ ಯುವರಾಜ್, ಮಧ್ಯಮ ವರ್ಗದ ಕುಟುಂಬದಿಂದ ಬಂದು ಇಷ್ಟು ದೊಡ್ಡ ಸಾಧನೆ ಮಾಡಿದ ನಮ್ಮ ಅಜ್ಜಿಯವರು ಸಮಾಜಕ್ಕೆ ಒಂದು ಸ್ಫೂರ್ತಿ ಎಂದರು.

Related Articles

Back to top button
error: Content is protected !!