ಅಣ್ಣಾಮಲೈ ರಾಜಕೀಯ ಆಂದೋಲನಕ್ಕೆ ಅಭೂತಪೂರ್ವ ಸ್ಪಂದನೆ: 24 ಗಂಟೆಗಳಲ್ಲಿ ಕೈಜೋಡಿಸಿದ 14 ಲಕ್ಷಕ್ಕೂ ಹೆಚ್ಚು ಜನರು
Views: 11
ಕನ್ನಡ ಕರಾವಳಿ ಸುದ್ದಿ: ತಮಿಳುನಾಡು ರಾಜಕಾರಣದಲ್ಲಿ ಮಹತ್ವದ ಬದಲಾವಣೆಗೆ ಮುನ್ನುಡಿ ಬರೆದಿರುವ ಕೆ. ಅಣ್ಣಾಮಲೈ, ಬಿಜೆಪಿ ತೊರೆದು ತಮ್ಮದೇ ಆದ ‘ಅಣ್ಣಾಮಲೈ 2.0’ ರಾಜಕಾರಣಕ್ಕೆ ಚಾಲನೆ ನೀಡಿದ್ದಾರೆ. ಅವರು ‘ವಿ ದಿ ಲೀಡರ್ಸ್’ ಅಂದರೆ ‘ನಾವೇ ನಾಯಕರು’ ಎಂಬ ಹೆಸರಿನ ಹೊಸ ಆಂದೋಲನವನ್ನು ಪ್ರಾರಂಭಿಸಿದ್ದಾರೆ. ತಮ್ಮ ಎಕ್ಸ್ ಖಾತೆಯ ಮೂಲಕ “ಬನ್ನಿ ಹೆಜ್ಜೆಯಿಡೋಣ, ಕ್ರಮ ತೆಗೆದುಕೊಳ್ಳೋಣ, ಬದಲಾವಣೆ ತರೋಣ” ಎಂದು ಕರೆ ನೀಡಿರುವ ಅಣ್ಣಾಮಲೈ, ತಮ್ಮ ರಾಜಕೀಯ ಆಂದೋಲನಕ್ಕೆ ಸೇರಿಕೊಳ್ಳುವಂತೆ ಜನರಿಗೆ ಮನವಿ ಮಾಡಿದ್ದಾರೆ.
ಈ ಕರೆಯ ಬೆನ್ನಲ್ಲೇ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದುವರೆಗೆ ಬರೋಬ್ಬರಿ 14 ಲಕ್ಷಕ್ಕೂ ಅಧಿಕ ಜನರು ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಆಂದೋಲನಕ್ಕೆ ಕೈಜೋಡಿಸಿದ್ದಾರೆ. ನೋಂದಣಿ ಪ್ರಕ್ರಿಯೆ ಇನ್ನೂ ಮುಂದುವರಿದಿದೆ. ಈ ಆಂದೋಲನದ ಮೂಲಕ ಅಣ್ಣಾಮಲೈ ಅವರು ಮುಂಬರುವ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಸದ್ಯ ಡಿಎಂಕೆ ಪ್ರಭಾವವನ್ನು ವಿಜಯ್ ಬಹುತೇಕ ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದು, ಎಐಎಡಿಎಂಕೆ ಪಕ್ಷವನ್ನು ಪಕ್ಕಕ್ಕೆ ಸರಿಸಿ ಆ ಜಾಗಕ್ಕೆ ತಮ್ಮದೇ ಆದ ರಾಜಕೀಯ ಶಕ್ತಿಯನ್ನು ತರಲು ಅಣ್ಣಾಮಲೈ ಯತ್ನಿಸುತ್ತಿದ್ದಾರೆ. ತಮಿಳುನಾಡಿನಲ್ಲಿ ಮತ್ತೆ ಎರಡು ಹೊಸ ಪ್ರಭಾವಿ ರಾಜಕೀಯ ಶಕ್ತಿಕೇಂದ್ರಗಳು ಸ್ಥಾಪನೆಯಾಗಲಿವೆಯೇ ಎಂಬ ಕುತೂಹಲ ಇದೀಗ ಮೂಡಿದೆ.






