ರಾಜಕೀಯ

ಹೊಂದಾಣಿಕೆ ರಾಜಕಾರಣ ಕೊನೆಯಾಗಲಿ: ಶಾಸಕ ಬಿ.ಪಿ.ಹರೀಶ್

Views: 45

ಕನ್ನಡ ಕರಾವಳಿ ಸುದ್ದಿ: ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಹೊಂದಾಣಿಕೆ ರಾಜಕಾರಣ ಕೊನೆಗೊಂಡು ಪಕ್ಷದ ಪ್ರಾಮಾಣಿಕ ಕಾರ್ಯಕರ್ತರಿಗೆ ನ್ಯಾಯ ಸಿಗಬೇಕು.ಇದನ್ನು ವರಿಷ್ಠರ ಗಮನಕ್ಕೆ ತರಲು ಶೋಕಾಸ್ ನೋಟಿಸ್ ಅವಕಾಶ ಕಲ್ಪಿಸಿದೆ. 72 ಗಂಟೆಯಲ್ಲಿ ಉತ್ತರ ನೀಡುವೆ ಎಂದು ಶಾಸಕ ಬಿ.ಪಿ.ಹರೀಶ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷದ ಕೆಲ ನಾಯಕರು ಕಾಂಗ್ರೆಸ್ ಏಜೆಂಟ್‌ರಂತೆ ಕೆಲಸ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಚುನಾವಣೆಗೂ ಮುನ್ನವೇ ಇದನ್ನು ಪಕ್ಷದ ಗಮನಕ್ಕೆ ತರಲಾಗಿತ್ತು. ಮತ್ತೊಮ್ಮೆ ವರಿಷ್ಠರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುವೆ ಎಂದು ಹೇಳಿದರು. ಪಕ್ಷಕ್ಕೆ ಮುಜುಗರಕ್ಕೆ ಆಗುವಂತೆ ನಾನು ನಡೆದುಕೊಳ್ಳುವುದಿಲ್ಲ, ಪಕ್ಷದ ಕಾರ್ಯಕರ್ತರಿಗೆ ಒಳಿತಾಗುವ ದಿನಗಳು ಸಮೀಪಿಸಿವೆ. ನೋಟಿಸ್ ನೀಡಿರುವುದರಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಕೈವಾಡ ಇಲ್ಲ ಎಂದು ಹೇಳಿದರು. ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿರುವುದು ಮಾಧ್ಯಮಗಳ ಮೂಲಕ ಗಮನಕ್ಕೆ ಬಂದಿದೆ. ಈ ಕುರಿತು ಹೆಚ್ಚು ಮಾತನಾಡಲು ಇಷ್ಟ ಪಡುವುದಿಲ್ಲ.

ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅವರ ಸೋಲಿಗೆ ಯಾರು ಕಾರಣ ಎಂದು ಈಗಾಗಲೇ ಹೇಳಿರುವೆ. ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ.ಗಾಯತ್ರಿ ಸಿದ್ದೇಶ್ವರ್ ಸೋಲಿನ ಬಗ್ಗೆ ಪಕ್ಷದಲ್ಲಿ ಆತ್ಮಾವಲೋಕನ ಸಭೆ ನಡೆದಿಲ್ಲ. ಈ ವಿಚಾರವನ್ನು ಸಮಿತಿ ಮುಂದೆ ತರುವೆ ಎಂದರು.

Related Articles

Back to top button