ಜನಮನ

ಹೂವಿನಕೆರೆ ಗೇರು ಪ್ಲಾಂಟೇಶನ್ ಪ್ರದೇಶದಲ್ಲಿ ವಿಷಪೂರಿತ ಹಾವುಗಳ ತಾಣ: ಜನವಸತಿ ಪರಿಸರದ ಮನೆ ಅಂಗಳದಲ್ಲಿ ಹಾವುಗಳು

Views: 0

ಕುಂದಾಪುರ :ತಾಲೂಕಿನ ಹೂವಿನಕೆರೆ ವಾದಿರಾಜ ಮಠದ ಹತ್ತಿರದ ನೂರಾರು ಎಕರೆ ಗೇರು ಪ್ಲಾಂಟೇಶನ್ ಪ್ರದೇಶದಲ್ಲಿ ನಾಗರಹಾವು, ಹೆಬ್ಬಾವು ಇನ್ನಿತರ ವಿಷಪೂರಿತ ಹಾವುಗಳ ತಾಣವಾಗಿದ್ದು, ಇದೀಗ ವಕ್ವಾಡಿ, ಹೂವಿನಕೆರೆ,ಕೆದೂರು, ಪ್ರದೇಶಗಳ ಮನೆ ಅಂಗಳಕ್ಕೆ ಹಾವುಗಳು ಆಹಾರಕ್ಕಾಗಿ ಹರಿದಾಡಿಕೊಂಡು ಬಂದು ಕೋಳಿ, ಬೆಕ್ಕುಗಳನ್ನು ತಿಂದು ಇಲ್ಲಿಯೇ ವಾಸಮಾಡುತ್ತಿವೆ.

ಎಲ್ಲೆಲ್ಲೋ ಹಿಡಿದು ತಂದಿರುವ ಹೆಬ್ಬಾವು, ನಾಗರಹಾವು ಇನ್ನಿತರ ವಿಷಪೂರಿತ ಹಾವುಗಳು ಈ ಪ್ರದೇಶದಲ್ಲಿ ಬಿಟ್ಟು ಹೋಗಿದ್ದರಿಂದ ರಸ್ತೆಯ ಎರಡು ಬದಿಯ ಜನ ವಸತಿ ಸ್ಥಳಗಳಾದ ವಕ್ವಾಡಿ, ಕೆದೂರು, ಹೂವಿನಕೆರೆ, ಚಾರು ಕೊಟ್ಟಿಗೆ, ಕುರುವಾಡಿ ಪ್ರದೇಶದ ಜನರಿಗೆ ಭಾರೀ ತೊಂದರೆಯಾಗಿದೆ.

ನಗರದಿಂದ ಆಸ್ಪತ್ರೆಯ ತ್ಯಾಜ್ಯಗಳು, ಪ್ಲಾಸ್ಟಿಕ್, ಕಸ ಕಡ್ಡಿಗಳು, ಫ್ಯಾಕ್ಟರಿಯಲ್ಲಿನ ನಿರುಪಯುಕ್ತ ವಿಷಪೂರಿತ ತ್ಯಾಜ್ಯಗಳನ್ನು ಈ ಪ್ರದೇಶದಲ್ಲಿ ಸುರಿದು ಹೋಗಿದ್ದರಿಂದ ಇಲ್ಲಿನ ಜನರ ತಮ್ಮ ಜಾನುವಾರುಗಳು ಮೇಯಲು ಹೋದಾಗ ವಿಷಪೂರಿತ ತ್ಯಾಜ್ಯಗಳನ್ನು ತಿಂದು ಸಾಯುತ್ತಿವೆ.

ವಿಷಪೂರಿತ ತ್ಯಾಜ್ಯ ಹಾಕಿರುವ ಈ ಪ್ರದೇಶದಿಂದ ಹರಿಯುವ ನೀರು ಕೃಷಿ ಭೂಮಿಗಳಿಗೆ ಮಳೆಗಾಲದಲ್ಲಿ ಹರಿದು ಬಂದಾಗ ಬೆಳೆಗಳಿಗೆ ಭಾರೀ ತೊಂದರೆಯಾಗುತ್ತಿದೆ.

ಹಾವು ತಂದು ಬಿಡುವವರು,ತ್ಯಾಜ್ಯ ಎಸೆಯುವವರ ವಿರುದ್ಧ ಹೂವಿನಕೆರೆ ವಾದಿರಾಜ ಸಮಿತಿಯವರು ಕಳ್ಳಿಗುಡ್ಡೆ ಫ್ರೆಂಡ್ಸ್ ನವರು ಸೇರಿ ಸಂಬಂಧಿಸಿದ ಇಲಾಖೆಗಳಿಗೆ ಈ ಹಿಂದೆ ಮನವಿ ಮಾಡಿಕೊಂಡಾಗ ಅಧಿಕಾರಿಗಳು ಕ್ರಮ ಕೈಗೊಂಡಿದ್ದರು. ಇತ್ತೀಚಿಗೆ ಗೇರು ಪ್ಲಾಂಟೇಶನ್ ಒಳಗಡೆ ಹೋಗಿ ಅಲ್ಲಲ್ಲಿ ತ್ಯಾಜ್ಯ ಸುರಿಯುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ

ಈ ಪ್ರದೇಶದಲ್ಲಿ ತಂದು ಬಿಟ್ಟಿರುವ ಹಾವುಗಳು ಅಲ್ಲಲ್ಲಿ ಸೇರಿಕೊಂಡು ಮೊಟ್ಟೆ ಇಟ್ಟು ಮರಿಗಳಾಗಿವೆ. ಮತ್ತೆ ಕೆಲವು ಹಾವುಗಳು ಹತ್ತಿರದಲ್ಲಿರುವ ರೈಲ್ವೆ ಮಾರ್ಗದಲ್ಲಿ ಸಂಚರಿಸುವಾಗ ರೈಲ್ವೆ ಗೆ ಸಿಕ್ಕಿ ಸಾವನಪ್ಪುತ್ತಿವೆ. ಹಾಗೆಯೇ ಮೇಯಲು ಬಿಟ್ಟ ಜಾನುವಾರುಗಳು ಸಹ ರೈಲು ಬಂದಾಗ ತಪ್ಪಿಸಿಕೊಳ್ಳಲಾಗದೆ ಅಡ್ಡಾದಿಡ್ಡಿ ಓಡಾಡಿ ಸಾವನಪ್ಪುತ್ತಿವೆ. ಈ ಬಗ್ಗೆ ಸೂಕ್ತ ಕ್ರಮಕ್ಕಾಗಿ ಇಲ್ಲಿನ ಜನರು ಮತ್ತೊಮ್ಮೆ ಎಚ್ಚೆತ್ತುಕೊಳ್ಳಬೇಕಾಗಿದೆ.

Related Articles

Back to top button