ಹಸೆಮಣೆ ಏರಬೇಕಿದ್ದ ವರನ ಕೈಗೆ ಕೈಕೋಳ:ಮದುವೆ ಮಾಡಿಕೊಳ್ಳಲು ಅವಕಾಶ ಕೊಡಿ ಎಂದು ವಧು ಕಣ್ಣೀರು
Views: 154
ಕನ್ನಡ ಕರಾವಳಿ ಸುದ್ದಿ: ಹಸೆಮಣೆ ಏರಬೇಕಿದ್ದ ವರನ ಕೈಗೆ ಹೂವಿನ ಹಾರದ ಬದಲು ಕೈಕೋಳ ಬಿದ್ದಿದೆ. ಭೋಪಾಲ್ನಲ್ಲಿ ನಡೆದ ಈ ನಾಟಕೀಯ ಘಟನೆಯಲ್ಲಿ ಕುಖ್ಯಾತ “ಇಲ್ಲೀಗಲ್ ಗ್ಯಾಂಗ್” ನಾಯಕ ಆಕಾಶ್ ಅಲಿಯಾಸ್ ಭೂರಾ ಎಂಬಾತನನ್ನು ಪೊಲೀಸರು ಮಂಟಪದಿಂದಲೇ ಬಂಧಿಸಿದ್ದಾರೆ
ಬುಧವಾರ ಮಧ್ಯಾಹ್ನ ಮದುವೆ ಶಾಸ್ತ್ರಗಳು ನಡೆಯುತ್ತಿದ್ದಾಗ ಕೋಹ್-ಎ-ಫಿಜಾ ಪೊಲೀಸರ ತಂಡ ದಾಳಿ ನಡೆಸಿದೆ. ವರ ಆಕಾಶ್ನನ್ನು ಬಂಧಿಸಿ ಕರೆದೊಯ್ಯುತ್ತಿದ್ದಂತೆ ಅತಿಥಿಗಳು ದಿಗ್ಧಮೆಗೊಂಡಿದ್ದಾರೆ.
ಪೊಲೀಸ್ ಅಧಿಕಾರಿಗಳ ಮುಂದೆ ಕಣ್ಣೀರು ಹಾಕಿದ ಸೀಮಾ, “ಸಾಹೇಬ್ರೇ, ನನ್ನ ಜೀವನ ಹಾಳಾಗುತ್ತದೆ. ಆತ ಮಾಡಿರುವ ಅಪರಾಧಗಳ ಬಗ್ಗೆ ನನಗೆ ತಿಳಿಯದು. ಮನೆಯಲ್ಲಿ ಅತಿಥಿಗಳು ಕಾಯುತ್ತಿದ್ದಾರೆ, ಹಳದಿ ಶಾಸ್ತ್ರ ಮುಗಿದಿದೆ. ದಯವಿಟ್ಟು ಕೇವಲ ಎರಡು ಗಂಟೆಗಳ ಕಾಲ ನನ್ನ ಪತಿಯನ್ನು ಬಿಟ್ಟುಬಿಡಿ, ಮದುವೆ ವಿಧಿವಿಧಾನಗಳನ್ನು ಮುಗಿಸುತ್ತೇವೆ,” ಎಂದು ಅಂಗಲಾಚಿದ್ದಾಳೆ. ಪೊಲೀಸರು ಇದಕ್ಕೆ ಒಪ್ಪದಿದ್ದಾಗ, “ಕನಿಷ್ಠ ಪೊಲೀಸ್ ವಶದಲ್ಲಾದರೂ ನಮಗೆ ಮದುವೆ ಮಾಡಿಕೊಳ್ಳಲು ಅವಕಾಶ ಕೊಡಿ” ಎಂದು ವಿನಂತಿಸಿದ್ದಾಳೆ. ಆದರೆ ಪೊಲೀಸರು ಈ ಯಾವುದೇ ಬೇಡಿಕೆಗೆ ಮಣಿಯದೆ ಆಕಾಶ್ನನ್ನು ಜೈಲಿಗಟ್ಟಿದ್ದಾರೆ.
ಮದುವೆಯ ದಿನವೇ ಪೊಲೀಸರು ದಾಳಿ ನಡೆಸಲು ಬಲವಾದ ಕಾರಣವಿತ್ತು. ಇತ್ತೀಚೆಗಷ್ಟೇ ಈ ಗ್ಯಾಂಗ್ 26 ವರ್ಷದ ಅರ್ಚಕರೊಬ್ಬರನ್ನು ಅಪಹರಿಸಿ, ಈದ್ದಾ ಹಿಲ್ಸ್ ಪ್ರದೇಶದ ಫ್ಲಾಟ್ನಲ್ಲಿ ಕೂಡಿ ಹಾಕಿತ್ತು. 8 ಲಕ್ಷ ರೂ. ಹಣಕ್ಕಾಗಿ ಅರ್ಚಕರ ಮೇಲೆ ಹಲ್ಲೆ ನಡೆಸಿ, ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದರು. ಅರ್ಚಕರು ಹೇಗೋ ತಪ್ಪಿಸಿಕೊಂಡು ಮಾಚ್ 11 ರಂದು ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಆಕಾಶ್ನ ಮದುವೆಯ ಸುಳಿವು ಪಡೆದು ನೇರವಾಗಿ ಮಂಟಪಕ್ಕೇ ಲಗ್ಗೆ ಇಟ್ಟಿದ್ದರು.
ಆಕಾಶ್ ಜೊತೆಗೆ ಆತನ ಗ್ಯಾಂಗ್ನ ಸದಸ್ಯರಾದ ರಾಜಂಜಿ ಠಾಕೂರ್, ಅಭಿಷೇಕ್ ಉಪಾಧ್ಯಾಯ, ಅಭಿಷೇಕ್ ಮೀನಾ, ನೀರಜ್ ಖಾಂಗೇ ಮತ್ತು ಅಮಿತ್ ಓಸ್ವಾಲ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಎಲ್ಲಾ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.






