ಬೆಂಗಳೂರಿನಲ್ಲಿ ಭಾರಿ ಮಳೆ: ಬೌರಿಂಗ್ ಆಸ್ಪತ್ರೆಯ ಕಂಪೌಂಡ್ ಗೋಡೆ ಕುಸಿದು 7 ಮಂದಿ ಸಾವು
Views: 9
ಕನ್ನಡ ಕರಾವಳಿ ಸುದ್ದಿ: ಬೆಂಗಳೂರಿನಲ್ಲಿ ಬುಧವಾರ ಸಂಜೆ ಧಾರಾಕಾರವಾಗಿ ಸುರಿದ ಮಳೆಗೆ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಕಂಪೌಂಡ್ ಗೋಡೆ ಕುಸಿದು 7 ಜನ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಮೃತರನ್ನು ಕರ್ನಾಟಕದ ಮೊಹಮ್ಮದ್ ಅಬ್ದುಲ್ (52), ಫಯಾಜ್ ಅಹ್ಮದ್(39), ಮುಸಾವೀರ್ ಬೇಗಂ(6), ಕೇರಳದ ಮಹಿಳೆಯರಾದ ಲತಾ (57), ಸ್ಮಿತಾ (47), ಉತ್ತರಪ್ರದೇಶದ ಮೊಹಮದ್ ಸಲಾವುದ್ದಿನ್ ಅನ್ಸಾರಿ (36) ಹಾಗೂ ಅಸ್ಸಾಂನ ಯುವಕ ನಸಿಮುಲ್ಲಾ (19) ಎಂದು ಗುರುತಿಸಲಾಗಿದೆ. ಅಲ್ಲದೆ, ಘಟನೆಯಲ್ಲಿ ಕೇರಳ ಮೂಲದ ಪ್ರೀತಿ (51), ಸಿಜಾ (45) ಹಾಗೂ ಮಾಯಾ (51) ಎಂಬ ಮೂವರು ಗಾಯಗೊಂಡಿದ್ದಾರೆ.
ತುರ್ತು ಚಿಕಿತ್ಸಾ ವಿಭಾಗದ ಪಕ್ಕದಲ್ಲಿದ್ದ ಗೋಡೆ ಕುಸಿದ ಪರಿಣಾಮ ಪಕ್ಕದ ರಸ್ತೆಯಲ್ಲಿದ್ದ ಫುಟ್‌ಪಾತ್ ಮೇಲೆ ವ್ಯಾಪಾರ ಮಾಡುತ್ತಿದ್ದವರು ಹಾಗೂ ಪಾದಚಾರಿಗಳಲ್ಲಿ ಬಾಲಕಿ ಸಹಿತ 7 ಜನ ಮೃತಪಟ್ಟಿದ್ದಾರೆ. ಕಾಂಪೌಂಡ್ ಗೋಡೆ ಕುಸಿದಿದ್ದರಿಂದ 10ಕ್ಕೂ ಅಧಿಕ ಮಂದಿ ಸಿಲುಕಿದ್ದು, ತಕ್ಷಣ ಅಲ್ಲಿದ್ದ ಸಾರ್ವಜನಿಕರು ಕಾರ್ಯಾಚರಣೆ ನಡೆಸಿ ಕೆಲವರನ್ನು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.
ಆಸ್ಪತ್ರೆ ಕಾಂಪೌಂಡ್ ಗೋಡೆಯನ್ನು ಹೊಸತಾಗಿ ನಿರ್ಮಾಣ ಮಾಡಲಾಗುತ್ತಿತ್ತು. ಹಳೆಯ ಗೋಡೆಗೆ ಹೊಂದಿಕೊಂಡಂತೆ ದೊಡ್ಡ ಟಾರ್ಪಲ್ ಹಾಕಿ ಕೆಲವರು ರಸ್ತೆ ಪಕ್ಕದಲ್ಲಿ ವ್ಯಾಪಾರ ಮಾಡುತ್ತಿದ್ದರು. ಸಂಜೆ ವೇಳೆ ಆರಂಭವಾದ ಮಳೆಗೆ ನೆನೆದ ಹಳೆಯ ಗೋಡೆ ಏಕಾಏಕಿ ಕುಸಿದಿದೆ ಎಂದು ಕೆಲ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹಾಗೂ ಶಿವಾಜಿನಗರ ಠಾಣೆ ಪೊಲೀಸರು ಭೇಟಿ ನೀಡಿದ್ದು ಮಾಹಿತಿ ಪಡೆಯುತ್ತಿದ್ದಾರೆ.
ಘಟನಾ ಸ್ಥಳ ಹಾಗೂ ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ಭೇಟಿ
ಆಸ್ಪತ್ರೆಗೆ ಸಿಎಂ ಭೇಟಿ, ಪಾಲಿಕೆ ಅಧಿಕಾರಿಗಳಿಗೆ ತರಾಟೆ: ಘಟನೆ ಬೆನ್ನಲ್ಲೇ, ಬೌರಿಂಗ್ ಹಾಗೂ ಲೇಡಿ ಕರ್ಜನ್ ಆಸ್ಪತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದರು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರಿಂದ ಮಾಹಿತಿ ಪಡೆದಿರುವ ಅವರು ಗಾಯಾಳುಗಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.
ಮುನ್ನೆಚ್ಚರಿಕೆ ವಹಿಸಿದರೆ ಈ ರೀತಿಯ ಅವಘಡ ಸಂಭವಿಸುತ್ತಿತ್ತೇ? ಹಳೆಯ ಗೋಡೆಯನ್ನು ಇಷ್ಟು ದಿನ ಗಮನಿಸಿರಲಿಲ್ಲವಾ? ಇಲಾಖೆಗಳ ನಡುವೆ ಸಮನ್ವಯತೆ ಇಲ್ಲವೇ? ಎಂದು ಪಾಲಿಕೆ ಅಧಿಕಾರಿಗಳಿಗೆ ಸಿಎಂ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ರೀತಿಯ ಹಳೆಯ ಕಾಂಪೌಂಡ್ ಬೇರೆ ಸ್ಥಳಗಳಲ್ಲಿದ್ದರೆ, ಕೂಡಲೇ ಅವುಗಳ ತೆರವು ಕಾರ್ಯಾಚರಣೆ ನಡೆಸುವಂತೆ ಅಧಿಕಾರಿಗಳಿಗೆ ಸಿಎಂ ತಾಕೀತು ಮಾಡಿದ್ದಾರೆ.






