ಶಿಕ್ಷಣ

ಸುಜ್ಞಾನ ಪಿಯು ಕಾಲೇಜು, ವಿದ್ಯಾರಣ್ಯ ಆಂಗ್ಲಮಾಧ್ಯಮ ಪ್ರೌಢಶಾಲೆ: ಅಕ್ಷರಾಭ್ಯಾಸ, ವಾಣಿ ವಿಲಾಸ ವಿದ್ಯಾರ್ಥಿ ನಿಲಯ, ನೂತನ ಕಟ್ಟಡಗಳ ಉದ್ಘಾಟನೆ

Views: 125

ಕನ್ನಡ ಕರಾವಳಿ ಸುದ್ದಿ: ವಿದ್ಯೆಯೊಂದಿಗೆ ಸಂಸ್ಕಾರ ಬೆಳೆಸಿಕೊಂಡಾಗ ಮಕ್ಕಳು ಆದರ್ಶ ವಿದ್ಯಾರ್ಥಿಯಾಗಿ ಬೆಳೆಯುತ್ತಾರೆ. ಯಾವುದೇ ವಿಷಯವನ್ನು ಅಧ್ಯಯನ ಮಾಡುವಾಗ ಅದರ ಬಗ್ಗೆ ಚಿಂತನೆ ಮಾಡಬೇಕು ಆಗ ನಿರ್ದಿಷ್ಟ ಗುರಿ ಯಶಸ್ವಿಯಾಗುತ್ತದೆ. ಪ್ರತಿಯೊಬ್ಬ ಮಗುವಿನಲ್ಲಿಯೂ ಸುಪ್ತವಾದ ಪ್ರತಿಭೆ ಅಡಗಿರುತ್ತದೆ ಅಂತಹ ಪ್ರತಿಭೆಯ ಅನಾವರಣಕ್ಕೆ ಅವಕಾಶ ಕಲ್ಪಿಸಿದಾಗ, ಆ ಮಗು ಹಾಗೂ ಸಮಾಜ ಅದರ ಪ್ರಯೋಜನ ಪಡೆಯಲು ಸಹಕಾರಿಯಾಗಬಲ್ಲದು.ಎಂದು ಶೃಂಗೇರಿ ಶ್ರೀ ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಅವರು ಆಶೀರ್ವಚನ ನೀಡುತ್ತಾ ಹೇಳಿದರು.

ಅವರು ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಸುಜ್ಞಾನ ಪಪೂ ಕಾಲೇಜು ಹಾಗೂ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರಣ್ಯ ಕ್ಯಾಂಪಸ್, ಯಡಾಡಿ-ಮತ್ಯಾಡಿ, ಕುಂದಾಪುರ ಇಲ್ಲಿ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರ ಶ್ರೀ ಭಾರತೀತೀರ್ಥ ಅನುಗ್ರಹದಿಂದ ನಡೆದ ಅಕ್ಷರಾಭ್ಯಾಸ ಮತ್ತು ಸುವಿದ್ಯಾರಂಭ, ವಾಣಿ ವಿಲಾಸ ವಿದ್ಯಾರ್ಥಿ ನಿಲಯ ಹಾಗೂ ನೂತನ ಕಟ್ಟಡವನ್ನು ದೀಪ ಪ್ರಜ್ವಲನಗೊಳಿಸಿದರು.

ಇದೇ ಸಂದರ್ಭದಲ್ಲಿ ಶಾಲಾ ಕಟ್ಟಡದಲ್ಲಿ  ಶಾರದ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಮಾಡಿ, ಎಲ್ಲಾ ವಿದ್ಯಾರ್ಥಿಗಳಿಗೆ ವಿದ್ಯಾರಂಭವನ್ನು  ನೆರವೇರಿಸಿರು.ಮತ್ತು ಕಟ್ಟಡ ನಿರ್ಮಾಣದಲ್ಲಿ ಶ್ರಮಿಸಿದವರನ್ನು ಗೌರವಿಸಿದರು.

ನಿವೃತ್ತ ಪ್ರಾಂಶುಪಾಲ ಪ್ರೊ| ಎಂ.ಬಾಲಕೃಷ್ಣ ಶೆಟ್ಟಿ ಅವರು ಮಾತನಾಡಿ, ಮಕ್ಕಳನ್ನು ಆಸಕ್ತಿ ಇರುವ ಕ್ಷೇತ್ರಗಳಿಗೆ ಹಾಕಿ ತರಬೇತಿ ನೀಡಿದಾಗ ಸಮಾಜದ ಆಸ್ತಿಯಾಗಿ ಬೆಳೆದು ಕೀರ್ತಿ ಸಂಪಾದಿಸುತ್ತಾರೆ ಎಂದರು.

ಉಡುಪಿ ಬಡಗುಬೆಟ್ಟು ಕೋ-ಆಪ ರೇಟಿವ್ ಸೊಸೈಟಿ ಇದರ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅವರು ವಿದ್ಯಾ ಸಂಸ್ಥೆಯು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆದು, ಉತ್ತಮ ಶಿಕ್ಷಣ ನೀಡುತ್ತಿರುವ ಸಂಸ್ಥೆಗೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಸೌಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸಬ್ಲಾಡಿ ಮಂಜಯ್ಯ ಶೆಟ್ಟಿ, ಶ್ರೀ ಶಾರದಾ ಪೀಠ ಶೃಂಗೇರಿ ಪ್ರಾಂತೀಯ ಧರ್ಮಾಧಿಕಾರಿ ವೇ|ಮೂ| ಲೋಕೇಶ ಅಡಿಗ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯ ರಘುರಾಮ ದೇವಾಡಿಗ, ಸುಜ್ಞಾನ್ ಎಜುಕೇಷನಲ್‌ ಟ್ರಸ್ಟ್ ಕುಂದಾಪುರ ಇದರ ಅಧ್ಯಕ್ಷ ಡಾ| ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್‌ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ, ಸುಜ್ಞಾನ ಪಪೂ ಕಾಲೇಜಿನ ಪ್ರಾಂಶುಪಾಲ ರಂಜನ್ ಬಿ ಶೆಟ್ಟಿ ಮತ್ತು ವಿದ್ಯಾರಣ್ಯ ಆಂಗ್ಲಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಪ್ರದೀಪ್ ಕೆ. ಉಪಸ್ಥಿತರಿದ್ದರು.

ಸುಜ್ಞಾನ್ ಎಜುಕೇಷನಲ್ ಟ್ರಸ್ಟ್ ಕುಂದಾಪುರ ಇದರ ಅಧ್ಯಕ್ಷ ಡಾ| ರಮೇಶ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ರಜತ ಭಟ್ ನಿರೂಪಿಸಿದರು.

Related Articles

Back to top button