ಶಿಕ್ಷಣ

ಶಂಕರನಾರಾಯಣದ ಮದರ್ ತೆರೇಸಾ ಪಿಯುಸಿ ಯ ಎಲ್ಲ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಮತ್ತು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವುದರೊಂದಿಗೆ ರಾಜ್ಯಮಟ್ಟದ ಅನೇಕ ರ‍್ಯಾಂಕ್‌ಗಳ ಮಹಾಪೂರ

Views: 16

ಕನ್ನಡ ಕರಾವಳಿ ಸುದ್ದಿ: ಶಂಕರನಾರಾಯಣದ ಮದರ್ ತೆರೇಸಾ ಪದವಿ ಪೂರ್ವ ಕಾಲೇಜು ಈ ವರ್ಷದ ಪದವಿ ಪೂರ್ವ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತೊಮ್ಮೆ ತನ್ನ ಪ್ರಭಾವವನ್ನು ದೃಢಪಡಿಸಿದೆ. ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಲ್ಲಿ ಶೇಕಡಾ 100 ಫಲಿತಾಂಶ ಸಾಧಿಸುವ ಮೂಲಕ ಕಾಲೇಜು ಶ್ರೇಷ್ಠತೆಯ ಹೊಸ ಮಟ್ಟವನ್ನು ತಲುಪಿದೆ.

ಒಟ್ಟು 175 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ ಪ್ರತಿಯೊಬ್ಬರೂ ಯಶಸ್ವಿಯಾಗಿ ಉತ್ತೀರ್ಣರಾಗಿರುವುದು ಸಂಸ್ಥೆಯ ಶಿಕ್ಷಣದ ಗುಣಮಟ್ಟವನ್ನು ಸ್ಪಷ್ಟವಾಗಿ ತೋರಿಸುತ್ತದೆ. ವಿಶೇಷವಾಗಿ, 92 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 83 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವುದು ಗಮನಾರ್ಹ ಸಾಧನೆಯಾಗಿದೆ.

 ಪ್ರಥಮ ಪಿಯುಸಿಗೆ ದಾಖಲಾಗುವಾಗ 81 ವಿದ್ಯಾರ್ಥಿಗಳು ಎಸ್.ಎಸ್.ಎಲ್. ಸಿ ಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು ಇದೀಗ ದ್ವಿತೀಯ ಪಿಯುಸಿ ಮುಗಿಸುವಾಗ ಒಟ್ಟು 112 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವುದು ಸಂಸ್ಥೆಯ ಸಾಧನೆಯಾಗಿದೆ.

ವಿಜ್ಞಾನ ವಿಭಾಗದಲ್ಲಿ ಸಂಜನಾ 595 ಅಂಕಗಳನ್ನು ಪಡೆದು 99.16% ಅಂಕಗಳೊಂದಿಗೆ ಕಾಲೇಜಿನ ಅಗ್ರಸ್ಥಾನವನ್ನು ಪಡೆದಿದ್ದಾಳೆ. ವಾಣಿಜ್ಯ ವಿಭಾಗದಲ್ಲಿ ಅಮೂಲ್ಯ ಕೂಡ 595 ಅಂಕಗಳನ್ನು ಪಡೆದು 99.16% ಫಲಿತಾಂಶದೊಂದಿಗೆ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾಳೆ. ಇವರಿಬ್ಬರ ಸಾಧನೆ ಕಾಲೇಜಿನ ಕೀರ್ತಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿದೆ.

ಈ ಅದ್ಭುತ ಸಾಧನೆಯ ಹಿಂದೆ ಪ್ರಾಂಶುಪಾಲರು ಮತ್ತು ಉಪ ಪ್ರಾಂಶುಪಾಲರ ಸಮಯೋಚಿತ, ಸುವ್ಯವಸ್ಥಿತ ಶೈಕ್ಷಣಿಕ ಯೋಜನೆಗಳು ಉಪನ್ಯಾಸಕರ ಶ್ರದ್ಧೆ, ನಿರಂತರ ಪರಿಶ್ರಮ ಮತ್ತು ವಿದ್ಯಾರ್ಥಿಗಳಿಗೆ ನೀಡಿದ ಮಾರ್ಗದರ್ಶನ ಪ್ರಮುಖ ಪಾತ್ರವಹಿಸಿದೆ. ಶಿಕ್ಷಣದ ಗುಣಮಟ್ಟವನ್ನು ಕಾಯ್ದುಕೊಂಡು, ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುತ್ತಿರುವ ಈ ಸಂಸ್ಥೆ ಮತ್ತೊಮ್ಮೆ ತನ್ನ ಶ್ರೇಷ್ಠತೆಯನ್ನು ಸಾಬೀತುಪಡಿಸಿದೆ.

ಈ ಯಶಸ್ಸಿನ ಹಿನ್ನೆಲೆಯಲ್ಲಿ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪ ಪ್ರಾಂಶುಪಾಲರು ಹಾಗೂ ಎಲ್ಲಾ ಉಪನ್ಯಾಸಕರು ವಿದ್ಯಾರ್ಥಿಗಳನ್ನು ಹಾರ್ದಿಕವಾಗಿ ಅಭಿನಂದಿಸಿ, ಅವರ ಭವಿಷ್ಯ ಇನ್ನಷ್ಟು ಪ್ರಕಾಶಮಾನವಾಗಲಿ ಎಂದು ಹಾರೈಸಿದ್ದಾರೆ.

Related Articles

Back to top button
error: Content is protected !!