ರಾಜಕೀಯ

ಸಿಎಂ ವಿರುದ್ಧ ಕೀಳು ಮಟ್ಟದ ಭಾಷೆ ಬಳಕೆ ಬಿಜೆಪಿ ನಾಯಕರಾದ ಈಶ್ವರಪ್ಪ, ಅನಂತ್ ಕುಮಾರ್ ಹೆಗ್ಡೆ‌ಗೆ ಹೈಕೋರ್ಟ್‌ ಎಚ್ಚರಿಕೆ

Views: 41

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರಾದ ಅನಂತ್ ಕುಮಾರ್ ಹೆಗ್ಡೆ‌ ಮತ್ತು ಕೆ.ಎಸ್‌ ಈಶ್ವರಪ್ಪ ಅವರಿಗೆ ಹೈಕೋರ್ಟ್‌  ಬಳಸುವ ಭಾಷೆಯ ಮೇಲೆ ಎಚ್ಚರಿಕೆ ಇರಲಿ ಎಂದು ಸೂಚನೆ ಕೊಟ್ಟಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಸಂಸದ ಅನಂತಕುಮಾರ್‌ ಹೆಗ್ಡೆ‌ ಬಳಕೆ ಮಾಡಿರುವುದು ಕೀಳು ಮಟ್ಟದ ಭಾಷೆ, ಇದು ಶೋಭೆ ತರುವಂಥದ್ದಲ್ಲ ಎಂದು ಹೈಕೋರ್ಟ್‌ ಶುಕ್ರವಾರ ಮೌಖಿಕವಾಗಿ ಹೇಳಿರುವುದಾಗಿ ಬಾರ್ & ಬೆಂಚ್ ವರದಿ ತಿಳಿಸಿದೆ.

ರಾಮ ಮಂದಿರ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಅನಂತಕುಮಾರ್‌ ಹೆಗ್ಡೆ, ತಮ್ಮ ವಿರುದ್ಧದ ಪ್ರಕರಣಕ್ಕೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆಯ ವೇಳೆ ನ್ಯಾ. ದೀಕ್ಷಿತ್‌ ಅವರು, “ಅನಂತ್‌ ಕುಮಾರ್ ಹೆಗ್ಡೆ ಉತ್ತಮ ವಾಗ್ಮಿಯಾಗಿರಬಹುದು. ಹಾಗಂತ ಅವರು, ಮುಖ್ಯಮಂತ್ರಿಗೆ ಗೌರವ ಕೊಡಲ್ಲ ಎಂದರೆ ಹೇಗೆ? ಸಾಂವಿಧಾನಿಕ ಹುದ್ದೆಯಲ್ಲಿರುವ ಮುಖ್ಯಮಂತ್ರಿ, ಪ್ರಧಾನಿ ಮಂತ್ರಿಗೆ ಗೌರವ ಕೊಡುವುದು ಜವಾಬ್ದಾರಿ. ಮುಖ್ಯಮಂತ್ರಿಗಳ ಕಾರ್ಯ ನೀತಿ ನಿಮಗೆ ಇಷ್ಟವಾಗದಿದ್ದರೆ, ಅದಕ್ಕೆ ಸರಿಯಾದ ರೀತಿಯಲ್ಲಿ ಟೀಕೆ ವ್ಯಕ್ತಪಡಿಸಬಹುದು. ಆದರೆ, ಕೀಳು ಭಾಷೆಯ ಪದ ಬಳಕೆ ಬಗ್ಗೆ ಎಚ್ಚರವಿರಲಿ ಎಂದು ಖಾರವಾಗಿ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.

ಅಂತಿಮವಾಗಿ ಪೀಠವು ಅರ್ಜಿದಾರರ ವಿರುದ್ಧ ಮುಂದಿನ ವಿಚಾರಣೆಯವರೆಗೆ ಯಾವುದೇ ದುರುದ್ದೇಶಪೂರಿತ ಕ್ರಮಕೈಗೊಳ್ಳದಂತೆ ಸರ್ಕಾರಕ್ಕೆ ಆದೇಶಿಸಿದೆ. ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿ, ವಿಚಾರಣೆ ಮುಂದೂಡಿದೆ. ಅರ್ಜಿದಾರರ ಪರವಾಗಿ ವಕೀಲ ಪವನ್‌ ಚಂದ್ರ ಶೆಟ್ಟಿ ಹೆಚ್, ಸರ್ಕಾರದ ಪರವಾಗಿ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಜಗದೀಶ್‌ ಅವರು ವಾದ ಮಂಡಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ಷೇಪಾರ್ಹ ಪದ ಬಳಕೆಗೆ ಸಂಬಂಧಿಸಿದಂತೆ ಅನಂತಕುಮಾರ್‌ ಹೆಗ್ಡೆ ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಠಾಣೆಯಲ್ಲಿಐಪಿಸಿ ಸೆಕ್ಷನ್‌ಗಳಾದ 153,153ಎ, 505(2) ಅಡಿ ಪ್ರಕರಣ ದಾಖಲಿಸಲಾಗಿದೆ. ಇದರ ವಜಾ ಕೋರಿ ಹೆಗ್ಡೆ ಹೈಕೋರ್ಟ್‌ ಕದ ತಟ್ಟಿದ್ದಾರೆ.

ಈಶ್ವರಪ್ಪಗೂ ಎಚ್ಚರಿಕೆ ಕೊಟ್ಟ ಹೈಕೋರ್ಟ್‌

“ನಮ್ಮದು ಬಹುಭಾಷೆ, ಬಹು ಧರ್ಮ ಮತ್ತು ಬಹು ಸಂಸ್ಕೃತಿಗಳ ರಾಷ್ಟ್ರ. ಎಷ್ಟೋ ಕಡೆ ಸ್ವಲ್ಪ ಏನೋ ಮಾತನಾಡಿದರೆ ಬೆಂಕಿ ಹತ್ತುವ ಪರಿಸ್ಥಿತಿ ಇದೆ. ಹಾಗಾಗಿ, ಭಾಷಾ ಪ್ರಯೋಗ ಜವಾಬ್ದಾರಿಯುತವಾಗಿರಬೇಕು. ಸಂಸ್ಕೃತಿ ಬಿಂಬಿತವಾಗುವಂತೆ ಮಾತನಾಡಬೇಕು ಎಂದು ಹೈಕೋರ್ಟ್‌ ಶುಕ್ರವಾರ ಬಿಜೆಪಿ ನಾಯಕ ಕೆ.ಎಸ್‌ ಈಶ್ವರಪ್ಪ ಅವರಿಗೆ ಮೌಖಿಕವಾಗಿ ಸೂಚಿಸಿದೆ.

ಈಶ್ವರಪ್ಪ ವಿರುದ್ಧದ ಎಫ್‌ಐಆರ್‌ ಮತ್ತು ಮುಂದಿನ ಪ್ರಕ್ರಿಯೆಗೆ ಮುಂದಿನ ವಿಚಾರಣೆವರೆಗೆ ತಡೆಯಾಜ್ಞೆ ವಿಧಿಸಿ, ಪ್ರತಿವಾದಿಗಳಿಗೆ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ. ಸರ್ಕಾರದ ಪರವಾಗಿ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಜಗದೀಶ್‌ ಅವರು ವಾದ ಮಂಡಿಸಿದ್ದಾರೆ

Related Articles

Back to top button