ಸಂಯುಕ್ತ ಕಿಸಾನ್ ಮೋರ್ಚಾದಿಂದ ನಾಳೆ ಗ್ರಾಮೀಣ ಭಾರತ್ ಬಂದ್; ಏನಿರುತ್ತೆ? ಏನಿರಲ್ಲ?
ಎಂಎಸ್‌ಪಿ ಸೇರಿ ಹಲವು ಬೇಡಿಕೆಗಳ ಈಡೇರಿಕೆಗಾಗಿ ರೈತ ಸಂಘಟನೆಗಳು ಶುಕ್ರವಾರ ಭಾರತ್ ಬಂದ್‌ಗೆ ಕರೆ ನೀಡಿವೆ. ಹಾಗಾಗಿ, ಶುಕ್ರವಾರ ಯಾವೆಲ್ಲ ಸೌಲಭ್ಯಗಳು ಇರಲಿವೆ? ಯಾವೆಲ್ಲ ಲಭ್ಯವಿರುವುದಿಲ್ಲ ಎಂಬುದರ ಮಾಹಿತಿ ಹೀಗಿದೆ…

Views: 46
ನವದೆಹಲಿ: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿ ಸೇರಿ ಹಲವು ಬೇಡಿಕೆಗಳ ಈಡೇರಿಕೆಗಾಗಿ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು ಶುಕ್ರವಾರ (ಫೆಬ್ರವರಿ 16) ಗ್ರಾಮೀಣ ಭಾರತ್ ಬಂದ್‌ಗೆ ಕರೆ ನೀಡಿವೆ. ಸಂಯುಕ್ತ ಕಿಸಾನ್ ಮೋರ್ಚಾ ಗ್ರಾಮೀಣ ಭಾರತ್ ಬಂದ್‌ಗೆ ಕರೆ ನೀಡಿದ್ದು, ದೇಶದ ಬಹುತೇಕ ಭಾಗಗಳ ರೈತ ಸಂಘಟನೆಗಳು ಬೆಂಬಲ ನೀಡಿವೆ. ಕಾರಣ ಜನರಿಗೆ ಹಲವು ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಹಾಗಾದರೆ ಶುಕ್ರವಾರ ಯಾವೆಲ್ಲ ಸೇವೆಗಳು ಲಭ್ಯ ಇರಲಿವೆ? ಯಾವ ಸೌಲಭ್ಯಗಳ ವ್ಯತ್ಯಯವಾಗಲಿದೆ ಎಂಬುರ ಮಾಹಿತಿ ಹೀಗಿದೆ…
ಏನಿರಲ್ಲ?
ಗ್ರಾಮೀಣ ಸಾರಿಗೆ, ಕೃಷಿ ಚಟುವಟಿಕೆಗಳು, ಗ್ರಾಮೀಣ ಭಾಗದಲ್ಲಿ ನರೇಗಾ ಕಾಮಗಾರಿಗಳು (ಕೆಲಸ), ಖಾಸಗಿ ಕಚೇರಿಗಳು, ಗ್ರಾಮೀಣ ಭಾಗದಲ್ಲಿ ಅಂಗಡಿಗಳು, ಗ್ರಾಮೀಣ ಕೈಗಾರಿಕೆಗಳು ಸ್ಥಗಿತಗೊಂಡಿರಲಿವೆ. ರೈಲು ರೋಖೊ ಚಳವಳಿಯೂ ನಡೆಯುವುದರಿಂದ ರೈಲು ಸೇವೆಯಲ್ಲೂ ವ್ಯತ್ಯಯವಾಗುವ ಸಾಧ್ಯತೆ ಇದೆ. ಗ್ರಾಮೀಣ ಭಾಗಗಳಿಗೆ ತರಕಾರಿ ಪೂರೈಕೆ, ನೀರು ಪೂರೈಕೆ ಸೇರಿ ಹಲವು ರೀತಿಯಲ್ಲಿ ತೊಂದರೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಏನಿರುತ್ತದೆ?
ಗ್ರಾಮೀಣ ಭಾರತ್ ಬಂದ್‌ಗೆ ಕರೆ ನೀಡಿದರೂ ಗ್ರಾಮಗಳಿಗೆ ಆಂಬುಲೆನ್ಸ್, ದಿನಪತ್ರಿಕೆ ಸರಬರಾಜು, ಮದುವೆ, ಮೆಡಿಕಲ್ ಶಾಪ್‌ಗಳು ತೆರೆದಿರಲಿವೆ. ವಾರ್ಷಿಕ ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ನೀಡುವುದಿಲ್ಲ ಎಂದು ರೈತ ಸಂಘಟನೆಗಳು ಘೋಷಿಸಿವೆ.
ರೈತರ ಬೇಡಿಕೆಗಳು
ಎಂ.ಎಸ್. ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಕನಿಷ್ಠ ಬೆಂಬಲ ಬೆಲೆ ಘೋಷಣೆ, ಕಾನೂನು ಜಾರಿಗೊಳಿಸಬೇಕು, ನರೇಗಾ ಯೋಜನೆಯನ್ನು ಇನ್ನಷ್ಟು ಸಮರ್ಥವಾಗಿ ಜಾರಿಗೊಳಿಸಬೇಕು, ಹಳೆಯ ಪಿಂಚಣಿ ಯೋಜನೆ ಜಾರಿಗೆ ತರಬೇಕು, ಎಲ್ಲ ಕಾರ್ಮಿಕರಿಗೂ ಸಾಮಾಜಿಕ ಭದ್ರತೆ ಒದಗಿಸಬೇಕು, ಬೆಳೆ ವಿಮೆ ನೀಡಬೇಕು, 300 ಯುನಿಟ್‌ವರೆಗೆ ಉಚಿತವಾಗಿ ವಿದ್ಯುತ್ ಪೂರೈಕೆ ಮಾಡಬೇಕು ಎಂಬುದು ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.