ಶಿಕ್ಷಣ

ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜ್ಞಾನವೇದಿಕೆ:ವಿಜ್ಞಾನ ಮತ್ತು ತಂತ್ರಜ್ಞಾನೋತ್ಸವ

Views: 153

ಕನ್ನಡ ಕರಾವಳಿ ಸುದ್ದಿ: ಬಸ್ರೂರು ಶ್ರೀ ಶಾರದಾ  ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭವಿಷ್ಯದ ವೈಜ್ಞಾನಿಕ ಚಿಂತನೆಗೆ ಶೈಕ್ಷಣಿಕ ವೇದಿಕೆಯಾಗಿ *ಸೈನ್ಸ್ ಕಾರ್ನಿವಾಲ್ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI)* ಪ್ರದರ್ಶನವನ್ನು ನಡೆಸಲಾಯಿತು.
ಈ ಸೃಜನಾತ್ಮಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮದೇ ಆದ ಆವಿಷ್ಕಾರವನ್ನು ತಯಾರಿಸಿ ಪೋಷಕರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಕೃತಕ ಬುದ್ಧಿಮತ್ತೆಯ ಕೆಲವು ಮಾದರಿಗಳನ್ನು ತಯಾರಿಸಿ ಅವುಗಳ ಉಪಯೋಗಗಳನ್ನು ಪ್ರತಿದಿನದ ಜೀವನದಲ್ಲಿ ಹೇಗೆ ಅನ್ವಯಿಸಬಹುದು ಎಂಬುದರ ಬಗ್ಗೆ ವಿವರವಾಗಿ ವಿವರಿಸಿದರು.
ಈ ಸಂದರ್ಭದಲ್ಲಿ ಪೋಷಕರು ಮಕ್ಕಳ ವಿಜ್ಞಾನಶಕ್ತಿಗೆ ಪೂರಕವಾಗಿ ಶಾಲೆಯು ಮಕ್ಕಳ ಪ್ರತಿಭೆ ಬೆಳೆಯಲು ಹಾಗೂ ಬುದ್ಧಿಶಕ್ತಿಗೆ ಪ್ರೋತ್ಸಾಹ ನೀಡಲು ನಿರಂತರವಾಗಿ ಶ್ರಮಿಸುತ್ತಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಗ್ಯಾಲಕ್ಸಿ ಸೈನ್ಸ್ ಕ್ಲಬ್ ಕುಂದಾಪುರ ಇಲ್ಲಿನ ಶ್ರೀ ಕಿರಣ್ ರವರು ವಿಜ್ಞಾನವು ನಮ್ಮ ಜೀವನದ ಪ್ರತಿಯೊಂದು ಅಂಶದಲ್ಲಿ ಅಡಗಿದ್ದು ಅದನ್ನು ಸೂಕ್ಷ್ಮವಾಗಿ ಗಮನಿಸುವ ಅಗತ್ಯವಿದೆ ಎಂದು ಮಕ್ಕಳಿಗೆ ಪ್ರೇರಣೆ ನೀಡಿದರು ಹಾಗೂ ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕೆ ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆಯನ್ನು ಆಯ್ಕೆ ಮಾಡಿಕೊಂಡ ನಿಮ್ಮ ನಿರ್ಧಾರ ಸರಿಯಾಗಿದೆ ಎಂದು ಪೋಷಕರನ್ನು ಉದ್ದೇಶಿಸಿ ಮಾತನಾಡಿದರು .
ಟಿಂಕರ್ ಸ್ಪೇಸ್ ಉಡುಪಿ ಇಲ್ಲಿನ ರೀಜನಲ್ ಮ್ಯಾನೇಜರ್ ಶ್ರೀ ಪ್ರಣವ್ ಆಚಾರ್ಯ ತಂತ್ರಜ್ಞಾನವು ಭವಿಷ್ಯದ ಹಾದಿಯನ್ನು ಹೇಗೆ ಸರಳಗೊಳಿಸುತ್ತದೆ ಮತ್ತು ಇದರ ಬಳಕೆಯನ್ನು ಸರಿಯಾಗಿ ಅರ್ಥೈಸಿಕೊಂಡು ನಮ್ಮ ಜೀವನದಲ್ಲಿ ಹೇಗೆ ಅನುಸರಿಸಬಹುದು ಇದರಿಂದ ಸಮಾಜಕ್ಕೆ ಏನು ಪ್ರಯೋಜನ ಎಂಬುದನ್ನು ಸ್ಪಷ್ಟವಾಗಿ ವಿವರಿಸಿದರು.
ಶಾಲಾ ಸಂಚಾಲಕರಾದ ಶ್ರೀ ಸಂತೋಷ್ ಶೆಟ್ಟಿ ಅವರು ಯಾವುದೇ ವಿಷಯದಲ್ಲಿ ಆಸಕ್ತಿ ಇದ್ದರೆ ಅದು ಬೇಗ ಅರ್ಥವಾಗುತ್ತದೆ ಎಂಬುದನ್ನು ಉದಾಹರಿಸಿ, ಅಧ್ಯಯನದ ಪ್ರಾರಂಭದಲ್ಲೇ ವಿಷಯವನ್ನು ಇಷ್ಟಪಡುವುದು ಮುಖ್ಯವೆಂದು ಹೇಳಿದರು. ಈ ನಿಟ್ಟಿನಲ್ಲಿ, ವಿಜ್ಞಾನ ಮತ್ತು ಗಣಿತ ಮಾತ್ರವಲ್ಲದೆ, ತಂತ್ರಜ್ಞಾನ ಹಾಗೂ ವಿಜ್ಞಾನ ಕ್ಷೇತ್ರಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಒಲವು ಮತ್ತು ಆಸಕ್ತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಶಾಲಾ ಶೈಕ್ಷಣಿಕ ನಿರ್ದೇಶಕರಾದ ಶ್ರೀ ಪ್ರಕಾಶ್ ಶೆಟ್ಟಿ ,ಪ್ರಾಂಶುಪಾಲರಾದ ಶ್ರೀಮತಿ ಮಮತಾ ಪೂಜಾರಿ, ಆಡಳಿತ ಅಧಿಕಾರಿ ಶ್ರೀಮತಿ ಆಶಾ ಶೆಟ್ಟಿ ಉಪಸ್ಥಿತರಿದ್ದರು .
ವಿದ್ಯಾರ್ಥಿನಿಯರಾದ ಧರಣಿ ಮತ್ತು ಪಂಚಮಿ ಸ್ವಾಗತಿಸಿದರು.ಶಿಕ್ಷಕಿ ವೀಣಾ.ಡಿ.ಮೆಲ್ಲೊ ವಂದಿಸಿದರು.

Related Articles

Back to top button