ಶ್ರೀ ವರಲಕ್ಷ್ಮೀ ಟ್ರಸ್ಟ್ ಗೃಹದಾನ ಯೋಜನೆ: ಮರವಂತೆಯ ಮಹಿಳೆಗೆ 20ನೆ ಮನೆ ಶಂಕುಸ್ಥಾಪನೆ

Views: 79
ಕನ್ನಡ ಕರಾವಳಿ ಸುದ್ದಿ: ಬಿಜೂರಿನ ಉದ್ಯಮಿ ಹಾಗೂ ಮಹಾದಾನಿ ಗೋವಿಂದ ಬಾಬು ಪೂಜಾರಿ ಅವರ ಅಧ್ಯಕ್ಷತೆಯ ಶ್ರೀ ವರಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಮರವಂತೆಯ ಬಡ ಮಹಿಳೆ ದೋಳೆಮನೆ ಚೈತ್ರಾ ಮೋಹನ ಪೂಜಾರಿ ಅವರಿಗೆ ಸಂಪೂರ್ಣ ಉಚಿತವಾಗಿ ನಿರ್ಮಿಸಿಕೊಡುತ್ತಿರುವ ವರಲಕ್ಷ್ಮೀ ನಿಲಯ ನಿರ್ಮಾಣದ ಶಂಕುಸ್ಥಾಪನೆ ಶುಕ್ರವಾರ ನಡೆಯಿತು. ಇದು ಟ್ರಸ್ಟ್ ಬಡವರಿಗೆ ನಿರ್ಮಿಸಿಕೊಂಡುತ್ತಿರುವ 20ನೆ ಮನೆಯಾಗಿದೆ.
ಶಂಕು ಸ್ಥಾಪನೆಯ ಸಂದರ್ಭ ಗೌರಿಗದ್ದೆ ಆಶ್ರಮದ ಅವದೂತ ಶ್ರೀ ವಿನಯ ಗುರೂಜಿ ಮತ್ತು ನಿಪ್ಪಾಣಿಯ ಶ್ರೀಕ್ಷೇತ್ರ ಮಹಾಕಾಳಿ ಮಹಾ ಸಂಸ್ಥಾನದ ಸದ್ಧರ್ಮ ಓಂ ಶಕ್ತಿಪೀಠದ ಅಧಿಪತಿ ಶ್ರೀ ಅರುಣಾನಂದ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವದಿಸಿದರು.
ಉಭಯರನ್ನು ಸ್ವಾಗತಿಸಿ ಮಾತನಾಡಿದ ಗೋವಿಂದ ಬಾಬು ಪೂಜಾರಿ ಚೈತ್ರಾ ಪೂಜಾರಿ ತೀರ ಬಡವರಾಗಿದ್ದು ತಮ್ಮ ಎರಡು ಮಕ್ಕಳೊಡನೆ ಮುರುಕು ಮನೆಯಲ್ಲಿ ದಿನ ದೂಡುತ್ತಿದ್ದಾರೆ. ಊರಿನ ಪ್ರಮುಖರ ಕೋರಿಕೆಯ ಮೇರೆಗೆ ತಮ್ಮ ಟ್ರಸ್ಟ್ನ ಗೃಹದಾನ ಅಭಿಯಾನದ ಮುಂದುವರಿಕೆಯಾಗಿ ಈ ಮನೆಯನ್ನು ನಿರ್ಮಿಸಿಕೊಡುತ್ತಿರುವುದಾಗಿ ತಿಳಿಸಿದರು.
ಪುರೋಹಿತ ಶ್ಯಾಮಸುಂದರ ಅಡಿಗ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಗಣೇಶ ಪೂಜಾರಿ, ಉದ್ಯಮಿಗಳಾದ ಸತೀಶ ಪೂಜಾರಿ ಗಂಗೊಳ್ಳಿಯರಮನೆ, ಕರುಣಾಕರ ಬಳ್ಕೋಡು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್. ಜನಾರ್ದನ ಮರವಂತೆ, ನಿವೃತ್ತ ಮುಖ್ಯೋಪಾಧ್ಯಾಯ ಎಂ. ಶಂಕರ ಬಿಲ್ಲವ, ಸಾಧನಾ ಸದಸ್ಯರಾದ ನಾಗೇಶ ಎಸ್. ರಾವ್. ದೇವಿದಾಸ ಶ್ಯಾನುಭಾಗ್, ಮೋಹನ ಹೆಬ್ಬಾರ್, ಕೃಷ್ಣ ಮೊಗವೀರ, ಸಂಗಮ ಯುವಕ ಮಂಡಲದ ಅಧ್ಯಕ್ಷ ಶರತ್ ಮರವಂತೆ, ರಾಜು ಗಾಂಧಿನಗರ, ಇತರರು ಇದ್ದರು.