ಶ್ರೀ ನಗರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತವಾಗಿ ವಾಪಸ್

Views: 88
ಕನ್ನಡ ಕರಾವಳಿ ಸುದ್ದಿ: ಶ್ರೀನಗರದಿಂದ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ಜನ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ವಾಪಸ್ ಕರೆತರಲಾಗಿದೆ.
ಪಾಕಿಸ್ತಾನದ ದಾಳಿ ನಡುವೆ ಉದ್ರಿಕ್ತ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದ ವಿದ್ಯಾರ್ಥಿಗಳನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಅವರ ನಿರ್ದೇಶನದ ಮೇರೆಗೆ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಜಮ್ಮುವಿನಿಂದ ರಾಜ್ಯದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತರುವಲ್ಲಿ ಯಶಸ್ವಿ ಆಗಿದ್ದಾರೆ.
ಪಾಕಿಸ್ತಾನವು ಅಧರ್ಮ ಮಾರ್ಗದಲ್ಲಿ ಭಾರತದ ಮೇಲೆ ದಾಳಿ ನಡೆಸುತ್ತಿದ್ದು, ಅದಕ್ಕೆ ಪ್ರತ್ಯುತ್ತರ ನೀಡಲಾಗುತ್ತಿದೆ. ಅಲ್ಲದೆ, ಕಣಿವೆ ರಾಜ್ಯದಲ್ಲಿನ ಎಲ್ಲರ ಜೀವ ರಕ್ಷಣೆ ಮಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯಂತೆ ವಿದ್ಯಾರ್ಥಿಗಳ ತೆರವಿಗೆ ಸರ್ವ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಈ ಕಾರ್ಯಾಚರಣೆಗೆ ನೆರವಾದ ಎಲ್ಲವರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೆಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
ಎಲ್ಲಾ ವಿದ್ಯಾರ್ಥಿಗಳು ಈಗಾಗಲೇ ನವದೆಹಲಿ ತಲುಪಿದ್ದು, ಅವರನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕಳಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಚನ್ನಪಟ್ಟಣ ತಾಲ್ಲೂಕಿನ ತಗಚಗೆರೆ ಗ್ರಾಮದ ವಿದ್ಯಾರ್ಥಿ ಹರ್ಷಿತ್ ಅವರ ಪೋಷಕರು ಜಮ್ಮುವಿನಲ್ಲಿ ಸಿಲುಕಿರುವ ತಮ್ಮ ಪುತ್ರನನ್ನು ರಕ್ಷಣೆ ಮಾಡಬೇಕು ಎಂದು ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದರು. ಕೂಡಲೇ ಈ ವಿಷಯವನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಗಮನಕ್ಕೆ ತಂದು ವಿದ್ಯಾರ್ಥಿಗಳ ಸುರಕ್ಷಿತ ಸ್ಥಳಾಂತರಕ್ಕೆ ಮನವಿ ಮಾಡಿದ್ದರು.
ಶನಿವಾರ ಶ್ರೀನಗರದಿಂದ ಭದ್ರತೆಯ ನಡುವೆ ಬಸ್ ನಲ್ಲಿ ಜಮ್ಮುವಿಗೆ ಪ್ರಯಾಣಿಸಿದ್ದ ವಿದ್ಯಾರ್ಥಿಗಳು ಭಾನುವಾರ ಮಧ್ಯಾಹ್ನದ ಹೊತ್ತಿಗೆ ರೈಲಿನಲ್ಲಿ ದೆಹಲಿ ತಲುಪಿದರು. ವಿದ್ಯಾರ್ಥಿಗಳ ಸ್ಥಳಾಂತರ ಮತ್ತು ಪ್ರಯಾಣದ ಎಲ್ಲಾ ಪ್ರಕ್ರಿಯೆಗಳನ್ನು ಕೇಂದ್ರ ಸಚಿವರು ಖುದ್ದು ಉಸ್ತುವಾರಿ ವಹಿಸಿ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದರು.
ವಿದ್ಯಾರ್ಥಿಗಳು ನವದೆಹಲಿಗೆ ತಲುಪಿದ ನಂತರ ಅವರ ಉಸ್ತುವಾರಿಯನ್ನು ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವಾಲಯದ ಅಧಿಕಾರಿಗಳೇ ಸಂಪೂರ್ಣವಾಗಿ ನೋಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ಸುರಕ್ಷಿತವಾಗಿ ಅವರ ಮನೆಗಳನ್ನು ತಲುಪುವವರೆಗೂ ನಾವು ಎಚ್ಚರಿಕೆ ವಹಿಸುತ್ತೇವೆ ಎಂದು ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.