ಶಿವಮೊಗ್ಗ:ದೇವರ ವಿಗ್ರಹಗಳನ್ನು ಭಕ್ತರೆದುರೇ ನೆಲಕ್ಕೆ ಕೆಡವಿ ವಿರೂಪ:ಆರೋಪಿಗಳ ಬಂಧನಕ್ಕೆ ಆಗ್ರಹ

Views: 82
ಕನ್ನಡ ಕರಾವಳಿ ಸುದ್ದಿ: ದೇವರ ವಿಗ್ರಹಗಳನ್ನು ನೆಲಕ್ಕೆ ಹಾಕಿ ಹಾಳುಗೆಡವಿದ ಆರೋಪಿಯನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಶಿವಮೊಗ್ಗದ ಬಂಗಾರಪ್ಪ ಬಡಾವಣೆಯ ನಿವಾಸಿಗಳು ಆಗ್ರಹಿಸಿದ್ದಾರೆ.
ಶಿವಮೊಗ್ಗ ಹೊರವಲಯ ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯಲ್ಲಿ ಶನಿವಾರ ಸಂಜೆ ಸ್ಥಳೀಯರು ಪಾರ್ಕ್ನಂತಹ ಜಾಗದಲ್ಲಿ ಗಣಪತಿ ಹಾಗೂ ನಾಗ ದೇವರ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿಕೊಂಡು ಬರುತ್ತಿದ್ದರು. ಈ ವೇಳೆ ವ್ಯಕ್ತಿಯೋರ್ವ ಬಂದು ಏಕಾಏಕಿ ಎರಡು ವಿಗ್ರಹಗಳನ್ನು ಕಟ್ಟೆಯಿಂದ ಕೆಳಗೆ ಹಾಕಿ ಕಾಲಿನಿಂದ ಒದ್ದು ವಿಗ್ರಹಗಳನ್ನು ವಿರೂಪಗೊಳಿಸಲು ಯತ್ನಿಸಿದ್ದಾನೆ. ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಂತೆಯೇ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಆರೋಪಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿ ಸ್ಥಳೀಯರು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿಗ್ರಹಗಳನ್ನು ನೆಲಕ್ಕೆ ಹಾಕಿ ವಿರೂಪಗೊಳಿಸಿ, ಪರಾರಿಯಾಗುವ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಭೇಟಿ ನೀಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯ ನಂತರ ಮಾತನಾಡಿದ ಎಸ್ಪಿ ಮಿಥುನ್ ಕುಮಾರ್, “ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಂಗಾರಪ್ಪ ಬಡಾವಣೆಯಲ್ಲಿ ಪಾರ್ಕ್ಗೆ ಮೀಸಲಿಟ್ಟಿದ್ದ ಜಾಗದಲ್ಲಿ ನಾಲ್ಕೈದು ಮರಗಳನ್ನು ನೆಟ್ಟು, ಎರಡು ಕಟ್ಟೆ ನಿರ್ಮಾಣ ಮಾಡಲಾಗಿದೆ. ಅದರ ಮೇಲೆ ಇಟ್ಟಿದ್ದ ಗಣಪತಿ ಹಾಗೂ ನಾಗರ ದೇವರ ವಿಗ್ರಹಗಳನ್ನು ವ್ಯಕ್ತಿಯೋರ್ವ ನೆಲಕ್ಕೆ ಬೀಳಿಸಿದ್ದಾನೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ಈ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಕೃತ್ಯದ ಹಿಂದೆ ಯಾರಿದ್ದಾರೆ ಎಂದು ಪರಿಶೀಲನೆ ನಡೆಸುತ್ತೇವೆ. ಒಂದು ವಿಡಿಯೋ ಇದೆ. ಅದನ್ನು ಸಹ ಪರಿಶೀಲನೆ ಮಾಡುತ್ತೇವೆ” ಎಂದರು.