ವೇಷ ಧರಿಸಿ ಸಂಪಾದಿಸಿದ ರವಿ ಕಟಪಾಡಿ ವೈದ್ಯಕೀಯಕ್ಕೆ 8.22 ಲಕ್ಷ ರೂ. ನೆರವು

Views: 0
ಉಡುಪಿ: ತನ್ನ ನೋವುಗಳನ್ನು ಮರೆತು ಬಡ ಬಗ್ಗರ ಸೇವೆ ಮಾಡುವ ಬಡವರ ಪಾಲಿನ ಆಶಾಕಿರಣ ರವಿ ಕಟಪಾಡಿ ಈ ಬಾರಿ ಕೃಷ್ಣಾಷ್ಟಮಿಯ ವೇಳೆ ವೇಷ ಧರಿಸಿದ ಸಂದರ್ಭ ಸಂಗ್ರಹವಾದ 8 ಲಕ್ಷ ರೂಪಾಯಿಗಳನ್ನು 5 ಮಂದಿ ಬಡ ಅಶಕ್ತ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ಒದಗಿಸಿ ಮಾನವೀಯತೆ ಮೆರೆದಿದ್ದಾರೆ.
ಸೋಮವಾರ ಕಟಪಾಡಿ ಶ್ರೀ ಭಗವಾನ್ ಬಬ್ಬು ಸ್ವಾಮಿ ದೈವಸ್ಥಾನ, ಕೊರಗಜ್ಜ ಕ್ಷೇತ್ರ ಪೇಟೆ ಬೆಟ್ಟು ಇಲ್ಲಿ ದೇವರ ದರ್ಶನ ಸೇವೆಯ ಸಂದರ್ಭ ರವಿ ಅವರು ಫಲಾನುಭವಿಗಳಿಗೆ ಧನ ಸಹಾಯ ಹಸ್ತಾಂತರಿಸಿದರು.
ಕಳೆದ ಕೆಲವು ವರ್ಷಗಳಿಂದ ಉಡುಪಿಯ ಕೃಷ್ಣಾಷ್ಟಮಿಯ ಸಂದರ್ಭದಲ್ಲಿ ವೇಷ ಧರಿಸಿ ಹಣ ಸಂಗ್ರಹ ಮಾಡಿ ಅದನ್ನು ಅನಾರೋಗ್ಯದಲ್ಲಿರುವ ಮಕ್ಕಳಿಗೆ ನೀಡುತ್ತಾ ಬರುತ್ತಿದ್ದ ರವಿ ಕಟಪಾಡಿ ಕೆಲವು ಜನರ ಆರೋಪಗಳಿಂದ ಬೇಸತ್ತು, ಈ ಬಾರಿ ಜನರಿಂದ ಯಾವುದೇ ಹಣ ಸಂಗ್ರಹ ಮಾಡುವುದಿಲ್ಲ. ಆದರೆ ಜನರು ಪ್ರೀತಿಯಿಂದ ಹಣವನ್ನು ತಂದುಕೊಟ್ಟರೆ ಅದನ್ನು ಅರ್ಹ ಬಡ ಮಕ್ಕಳಿಗೆ ಮುಟ್ಟಿಸುವ ಕೆಲಸ ಮಾಡುತ್ತೇನೆ ಎಂಬ ಭರವಸೆ ನೀಡಿದ್ದರು.
ಈ ವರ್ಷ ರವಿ ಕಟಪಾಡಿ ಅವರು ಆಕರ್ಷಕ ವೇಷ ಧರಿಸಿದ್ದು, ತಂಡವು ಒಟ್ಟು 8,22,212 ರೂಪಾಯಿ ಸಂಗ್ರಹಿಸಿದೆ. ಈ ಹಣವನ್ನು ಅನಾರೋಗ್ಯದಿಂದ ಬಳಲುತ್ತಿರುವ ಕಾರ್ಕಳ ಕಣಜಾರು ನಿಶ್ಚಿತಾ ಕೆ. ಅವರಿಗೆ 3 ಲಕ್ಷ ರೂ., ಕುಂದಾಪುರದ ಕಟ್ ಬೇಲ್ತೂರು ನಾಗೇಂದ್ರ ಅವರಿಗೆ 2 ಲಕ್ಷ 50 ಸಾವಿರ ರೂ., ಮಾರಣ ಕಟ್ಟೆ ಇಡೂರು ಸುಶಾಂತ್ ಶೆಟ್ಟಿ ಮತ್ತು ಋತಿಕ್ ಮೂಡುಬಿದಿರೆ ಅವರಿಗೆ ತಲಾ 1 ಲಕ್ಷ ರೂ., ಸಸಿಹಿತ್ಲುವಿನ ಪೂರ್ವಿ ಅವರಿಗೆ 50 ಸಾವಿರ ರೂ. ಮೊತ್ತವನ್ನು ವಿತರಿಸಿದರು.
ಕಳೆದ 9 ವರ್ಷಗಳಿಂದ ಅಷ್ಟಮಿಯಂದು ವೇಷ ಧರಿಸಿ ಸಂಗ್ರಹಿಸಲಾದ ಒಟ್ಟು 1 ಕೋಟಿ 22 ಲಕ್ಷ ರೂ.ಗಳನ್ನು 118 ಬಡ ಅಶಕ್ತ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ನೀಡಿದಂತಾಗಿದೆ ಎಂದು ರವಿ ಕಟಪಾಡಿ ಅವರು ಈ ಸಂದರ್ಭದಲ್ಲಿ ಹೇಳಿದರು. ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಪೇಟೆಬೆಟ್ಟು ಗುರಿಕಾರರಾದ ಹರಿಶ್ಚಂದ್ರ ಪಿಲಾರು ಮತ್ತು ತುಕಾರಾಮ್ ಎಸ್. ಉರ್ವ ಶುಭ ಹಾರೈಸಿದರು. ಮಹೇಶ್ ಶೆಣೈ, ಅರ್ಚಕ ಜಯಕರ ಎ., ಪ್ರಮುಖರಾದ ಯಶವಂತ್, ಶಂಕರ್ ಕಟಪಾಡಿ, ರಾಜ್ ಗೋಪಾಲ್, ಲಕ್ಷ್ಮಣ್, ಉಮೇಶ್ ಹಾಗೂ ರವಿ ಫ್ರೆಂಡ್ಸ್ ಕಟಪಾಡಿ ಉಪಸ್ಥಿತರಿದ್ದರು.