ವಿವಾಹಿತೆ ಯುವಕನೊಂದಿಗೆ ತೆರಳಿರುವ ಘಟನೆ: ಯುವಕನ ಮನೆ ಮೇಲೆ ದಾಳಿ
Views: 127
ಕನ್ನಡ ಕರಾವಳಿ ಸುದ್ದಿ: ವಿವಾಹಿತೆಯೊಬ್ಬರು ಯುವಕನೊಂದಿಗೆ ತೆರಳಿರುವ ಘಟನೆ ಹಿನ್ನೆಲೆ, ಬೆಳಗಾವಿ ತಾಲೂಕಿನ ಭರಮ್ಯಾನಟ್ಟಿ ಗ್ರಾಮದಲ್ಲಿ ಯುವಕನ ಮನೆ ಮೇಲೆ 200ಕ್ಕೂ ಹೆಚ್ಚು ಜನರು ಮಾರಕಾಸ್ತ್ರಗಳೊಂದಿಗೆ ದಾಳಿ ನಡೆಸಿದ ಆರೋಪ ಕೇಳಿಬಂದಿದೆ. ಆರೋಪಿಸಲಾಗಿದೆ.

ಘಟನೆಯಲ್ಲಿ ಮನೆ ಸಂಪೂರ್ಣ ಜಖಂಗೊಂಡಿದ್ದು, ಮನೆಯಲ್ಲಿದ್ದ ವಸ್ತುಗಳನ್ನು ಧ್ವಂಸಗೊಳಿಸಿ, ಚಿನ್ನಾಭರಣ, ನಗದು ಹಾಗೂ ಕುರಿಗಳನ್ನು ಕೊಂಡೊಯ್ದಿದ್ದಾರೆ.
ಮಾಹಿತಿಯ ಪ್ರಕಾರ, ಕಳೆದ ವರ್ಷ ಬಸಪ್ಪ ನಾಯಕ ಅವರೊಂದಿಗೆ ವಿವಾಹವಾಗಿದ್ದ ನಾಗವ್ವ ನಾಯಕ ಅವರು ಎರಡು ದಿನಗಳ ಹಿಂದೆ ಯಲ್ಲಪ್ಪ ನಾಯಕ ಎಂಬ ಯುವಕನೊಂದಿಗೆ ತೆರಳಿದ್ದಾರೆ ಎನ್ನಲಾಗಿದೆ.
ಬಸಪ್ಪ ನಾಯಕ ಮತ್ತು ಯಲ್ಲಪ್ಪ ನಾಯಕ ಆತ್ಮೀಯ ಸ್ನೇಹಿತರಾಗಿದ್ದು, ಇಬ್ಬರೂ ದಂಪತಿಯೊಂದಿಗೆ ಸೇರಿ ಬೆಳಗಾವಿಯ ಉದ್ಯಮಭಾಗದಲ್ಲಿರುವ ಅಶೋಕ್ ಐರನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಯಲ್ಲಪ್ಪ ಮತ್ತು ನಾಗವ್ವ ನಡುವೆ ಸಲುಗೆ ಬೆಳೆದಿದ್ದು, ಬಳಿಕ ಇಬ್ಬರೂ ಊರು ತೊರೆದಿದ್ದಾರೆ ಎನ್ನಲಾಗಿದೆ.
ಈ ಘಟನೆಯಿಂದ ಆಕ್ರೋಶಗೊಂಡ ವಿವಾಹಿತೆಯ ಕುಟುಂಬಸ್ಥರು ಹಾಗೂ ಪತಿಯ ಕಡೆಯವರು ಸೇರಿ ಯಲ್ಲಪ್ಪ ನಾಯಕನ ಮನೆ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಖಡ್ಗ, ಕುಡಗೋಲು, ಬಡಿಗೆ ಸೇರಿದಂತೆ ಮಾರಕಾಸ್ತ್ರಗಳೊಂದಿಗೆ ಬಂದಿದ್ದ ಗುಂಪು ಮನೆಯ ಹಂಚುಗಳನ್ನು ಪುಡಿಗೈದು, ಅಲ್ಮಾರಿ, ಟಿವಿ ಸೇರಿದಂತೆ ಹಲವು ಗೃಹೋಪಯೋಗಿ ವಸ್ತುಗಳನ್ನು ಧ್ವಂಸಗೊಳಿಸಿದೆ ಎನ್ನಲಾಗಿದೆ.
ಇದೇ ವೇಳೆ ಮನೆಯಲ್ಲಿದ್ದ ಚಿನ್ನಾಭರಣ, ನಗದು ಹಣ ಹಾಗೂ ಸುಮಾರು 25 ಕುರಿಗಳನ್ನು ಕೂಡ ಕೊಂಡೊಯ್ಯಲಾಗಿದೆ ಎಂದು ಸಂತ್ರಸ್ತ ಕುಟುಂಬ ಆರೋಪಿಸಿದೆ.
ಘಟನೆ ಬಳಿಕ ಸಂತ್ರಸ್ತ ಕುಟುಂಬ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಕಮಿಷನರ್ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದು, ದಾಳಿಯಲ್ಲಿ ಭಾಗಿಯಾಗಿದ್ದವರನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ.






